ವಕೀಲರು ಭಾಷಾಂತರ ಮಾಡುವುದನ್ನು ಕಲಿತುಕೊಂಡಲ್ಲಿ ಸಮರ್ಥ ವಾದ ಮಂಡಿಸಬಹುದು: ಪ್ರೊ.ಈಶ್ವರ್ ಭಟ್

Update: 2018-08-18 17:53 GMT

ಮೈಸೂರು,ಆ.18: ವಕೀಲ ವೃತ್ತಿಯನ್ನು ಕೈಗೊಳ್ಳುವವರು ಭಾಷಾಂತರ ಮಾಡುವುದನ್ನು ಕಲಿತುಕೊಂಡಲ್ಲಿ ಮುಂದೆ ನ್ಯಾಯಾಲಯಗಳಲ್ಲಿ ಸಮರ್ಥವಾದ ಮಂಡಿಸಬಹುದು ಎಂದು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿ.ವಿ.ಯ ಉಪಕುಲಪತಿ ಪ್ರೊ.ಈಶ್ವರ್ ಭಟ್ ಹೇಳಿದರು.

ನಗರದ ವಿದ್ಯಾವರ್ಧಕ ಕಾನೂನು ಕಾಲೇಜು ಸಭಾಂಗಣದಲ್ಲಿ ಕಾಲೇಜು ವತಿಯಿಂದ ಶನಿವಾರ ಆಯೋಜಿಸಿದ್ದ ಶೈಕ್ಷಣಿಕ ಚಟುವಟಿಕೆಗಳು ಮತ್ತು ಫ್ರೆಶರ್ಸ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಹಳಷ್ಟು ಮಂದಿ ವಕೀಲರು ವಾದ ವಿವಾದಗಳನ್ನು ಮಂಡಿಸಿರುವ ಸಮಯದಲ್ಲಿ ಎದುರು ವಕೀಲರುಗಳು ಮಂಡಿಸುವ ಅಂಶಗಳನ್ನು ಮೊದಲು ತದೇಕ ಚಿತ್ತದಿಂದ ಆಲಿಸುವುದು ಬಹಳ ಮುಖ್ಯ. ತದ ನಂತರ ಅವುಗಳನ್ನು ದೀರ್ಘವಾಗಿ ಅಧ್ಯಯನ ಮಾಡಿ ಅದಕ್ಕೆ ಪ್ರತಿ ವಾದ ಮಂಡಿಸಲು ಯೋಚನೆಗಳನ್ನು ಸಿದ್ಧ ಪಡಿಸಿಕೊಳ್ಳಬೇಕು. ಇದಕ್ಕಾಗಿ ಅವರುಗಳು ಮೊದಲು ಭಾಷಾಂತರ ಮಾಡುವುದನ್ನು ಕಲಿತುಕೊಳ್ಳಲು ಮುಂದಾಗಬೇಕೆಂದು ಹೊಸ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾನೂನು ಶಾಸ್ತ್ರ ಅಧ್ಯಯನ ಮಾಡುವವರು ಸಮಯ ಪ್ರಜ್ಞೆಯನ್ನು ಬೆಳಸಿಕೊಳ್ಳುವುದು ಬಹಳ ಮುಖ್ಯ. ಯಾವುದೇ ನ್ಯಾಯಾಲಯಗಳಲ್ಲಿ ಇಂತಹ ದಿನ ನಿಮ್ಮ ವಿಚಾರಣೆ ನಡೆಸಲಾಗುವುದು ಎಂದು ದಿನಾಂಕ ಮತ್ತು ಸಮಯವನ್ನು ನಮೂದಿಸಿ ನೋಟಿಸುಗಳನ್ನು ಜಾರಿ ಮಾಡುತ್ತವೆ. ನೋಟಿಸ್ ಗಳು ಬಂದ ಕೂಡಲೇ ಅವುಗಳನ್ನು ಕೂಲಂಕುಷವಾಗಿ ಓದಿದ ನಂತರ ವಿಚಾರಣೆಯ ದಿನಾಂಕ ಮತ್ತು ಸಮಯವನ್ನು ತಮ್ಮ ದಿನಚರಿಯಲ್ಲಿ ದಾಖಲು ಮಾಡಿಕೊಂಡು ವಿಚಾರಣೆಯ ಬಗ್ಗೆ ಅಧ್ಯಯನವನ್ನು ತಮ್ಮ ದಿನಚರಿಯಲ್ಲಿ ದಾಖಲು ಮಾಡಿಕೊಂಡು ವಿಚಾರಣೆಯ ಬಗ್ಗೆ ಅಧ್ಯಯನ ನಡೆಸುವುದರೊಂದಿಗೆ ನ್ಯಾಯಾಲಯವು ನಿಗದಿ ಪಡಿಸಿರುವ ವಿಚಾರಣಾ ದಿನಾಂಕದಂದು ನಿಗದಿತ ಸಮಯಕ್ಕೆ ಸರಿಯಾಗಿ ನ್ಯಾಯಾಲಯದ ಮುಂದೆ ಹಾಜರಾಗುವುದರ ಮೂಲಕ ಸಮಯ ಪ್ರಜ್ಞೆ ಯನ್ನು ಕಾಯ್ದುಕೊಳ್ಳುವಂತೆ ಕಿರಿಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಸದಸ್ಯ ಹಾಗೂ ಹಿರಿಯ ವಕೀಲರೂ ಆದ ಚಂದ್ರಮೌಳಿ ಮಾತನಾಡಿ, ಕಾಲೇಜಿನಲ್ಲಿ ಪಾಠ ಪ್ರವಚನಗಳನ್ನು ಮಾಡುವ ಸಂದರ್ಭದಲ್ಲಿ ಯಾವುದೇ ವಿಷಯದ ಬಗ್ಗೆ ನಿಮಗೆ ಅನುಮಾನ ಕಂಡು ಬಂದಲ್ಲಿ, ಕೂಡಲೇ ಅದನ್ನು ಉಪನ್ಯಾಸಕರ ಗಮನಕ್ಕೆ ತಂದು ಅವುಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಮುಂದಾಗುವುದು ಸೂಕ್ತ. ಇದರೊಂದಿಗೆ ಯುವ ವಕೀಲರಾಗಲಿರುವ ನೀವು ಸ್ವತಂತ್ರವಾಗಿ ಯೋಚಿಸುವುದನ್ನು ರೂಢಿಸಿಕೊಳ್ಳಬೇಕು. ಹಾಗೂ ಹೆಚ್ಚು ಹೆಚ್ಚಾಗಿ ಕಾನೂನು ಪುಸ್ತಕಗಳನ್ನು ಓದಿದಲ್ಲಿ ಸಮರ್ಥ ವಾದವನ್ನು ಮಂಡಿಸಲು ಸಹಾಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಎಸ್.ಎನ್, ಲಕ್ಷ್ಮೀನಾರಾಯಣ್, ಸದಸ್ಯ ಸ್ವಾಮಿ ಲಿಂಗಪ್ಪ, ಪ್ರಾಂಶುಪಾಲ ಪ್ರೊ. ಕೆ.ಬಿ. ವಾಸುದೇವ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News