ಮಂಡ್ಯ: ಕೊಡಗು ಪ್ರವಾಹ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ ಜನತೆ

Update: 2018-08-18 18:09 GMT

ಮಂಡ್ಯ, ಆ.18: ವರುಣನ ಆರ್ಭಟಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರ ನೆರವಿಗೆ ಜಿಲ್ಲೆಯ ಜನತೆ ಸಹಾಯಹಸ್ತ ನೀಡಲು ಮುಂದಾಗಿದ್ದು, ಹಲವು ಸಂಘಸಂಸ್ಥೆಗಳು, ಗ್ರಾಮಸ್ಥರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಆಹಾರ, ದವಸಧಾನ್ಯ, ಆರ್ಥಿಕ ಸಹಾಯ ಮಾಡಿದ್ದಾರೆ.

ಅಕ್ಕಿ, ಬೇಳೆ, ಬೆಲ್ಲ, ಚಪಾತಿ, ಇತ್ನಿತರ ಆಹಾರ ಪದಾರ್ಥಗಳು ಹಾಗೂ ಹಣವನ್ನು ಜಿಲ್ಲಾಡಳಿತ ಸ್ಥಾಪಿಸಿರುವ ಕೊಡಗು ನೆರೆ ಸಂತ್ರಸ್ಥರ ನಿಧಿಗೆ ನೀಡುತ್ತಿದ್ದಾರೆ. ಜಿಲ್ಲಾಡಳಿತವೂ ನೆರವಿಗೆ ಕೈಚಾಚಲು ಜಿಲ್ಲೆಯ ಜನತೆಗೆ ಮನವಿ ಮಾಡಿದೆ.

ಮಂಡ್ಯ ತಾಲೂಕಿನ ಚಾಮಲಾಪುರ ಗ್ರಾಮಸ್ಥರು 12 ಕ್ವಿಂಟಾಲ್ ಅಕ್ಕಿ, 15 ಕೆ.ಜಿ. ಬೇಳೆ, ಒಂದು ಕ್ವಿಂಟಾಲ್ ಬೆಲ್ಲ ಮತ್ತು ಐದು ಸಾವಿರ ರೂ.ಗಳನ್ನು  ಕೊಡಗು ನೆರೆ ಸಂತ್ರಸ್ಥರಿಗೆ ಕಳುಹಿಸಲು ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‍ಗೆ ಹಸ್ತಾಂತರಿಸಿದರು. 

ಈ ವೇಳೆ ವಿಜಯ್ ಮಾತನಾಡಿ, ವರುಣನ ಅಬ್ಬರದಿಂದಾಗಿ ಮಡಿಕೇರಿ ಜಿಲ್ಲೆ ಜನತೆ ಮನೆ-ಮಠಗಳನ್ನು ಕಳೆದುಕೊಂಡಿದ್ದಾರೆ. ಇಂತಹ ಜನರ ರಕ್ಷಣೆಗಾಗಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಂತ್ರಸ್ತರ ಕೇಂದ್ರವನ್ನು ತೆರೆದಿದ್ದು, ಧವಸ, ಧಾನ್ಯ, ಇತರೆ ವಸ್ತುಗಳನ್ನು ನೀಡಬೇಕು ಎಂದು ಮನವಿ ಮಾಡಿದರು. 

ಮದ್ದೂರು ವರದಿ: ಪಟ್ಟಣದ ಸೆಸ್ಕ್ ಇಲಾಖೆ ಆವರಣದಲ್ಲಿ ಶನಿವಾರ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸಿಬ್ಬಂದಿ ಹಣದ ಜತೆಗೆ ಬಟ್ಟೆ, ದವಸ, ಧಾನ್ಯ, ಬಿಸ್ಕೆಟ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಸಂಗ್ರಹಿಸಿ ವಾಹನ ಮೂಲಕ ಕೊಡಗು ಜಿಲ್ಲೆಗೆ ಕಳುಹಿಸಿಕೊಟ್ಟರು.

ಸೆಸ್ಕ್ ಎಇಇ ಮಂಜುನಾಥ್, ಅಧಿಕಾರಿಗಳಾದ ಮಹೇಶ್, ಗೋವಿಂದರಾಜು, ಗುತ್ತಿಗೆದಾರ ಶಿವಲಿಂಗಯ್ಯ, ವಿಜಯಕುಮಾರ್, ಇತರರು ಹಾಜರಿದ್ದರು.
ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಆಸರೆ ಸೇವಾ ಟ್ರಸ್ಟ್, ಉದಯ್ ಹೆಲ್ತ್ ಲೈನ್‍ನಿಂದ ಸುಮಾರು 3 ಸಾವಿರ ಚಪಾತಿಯನ್ನು ನೆರೆ ಸಂತ್ರಸ್ತರಿಗೆ ನೀಡಲು ಸಿದ್ಧತೆ ನಡೆದಿದ್ದು, ಇದಕ್ಕೆ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ.

ಜಲಪ್ರಳಯದಿಂದ ನಲುಗಿರುವ ಕೊಡಗು ಜನತೆಗೆ ಮಳವಳ್ಳಿಯ ವಿಶ್ವ ಹಿಂದೂ ಪರಿಷತ್ 3 ಸಾವಿರಕ್ಕೂ ಹೆಚ್ಚು ಚಪಾತಿ, ಬ್ರೆಡ್, ಬಟ್ಟೆಗಳನ್ನು ರವಾನಿಸಲು ಸಿದ್ದತೆ ನಡೆಸಿದ್ದು, ಪಟ್ಟಣದ ಪುರಸಭೆ ಕಚೇರಿಯ ಮುಂಭಾಗದ ರಸ್ತೆಯಲ್ಲಿರುವ ಶ್ರೀ ವೀರಭಧ್ರೇಶ್ವರ ದೇವಸ್ಥಾನದಲ್ಲಿ ಸಂತ್ರಸ್ಥರಿಗಾಗಿ ದಾನಿಗಳಿಂದ ಸಂಗ್ರಹ ಕೇಂದ್ರವನ್ನು ತೆರೆದಿದೆ.

ಈಗಾಗಲೇ 3000 ಚಪಾತಿ, ಬ್ರೆಡ್, ಬಿಸ್ಕೆಟ್ಸ್, ರಸ್ಕ್, ಚಟ್ನಿ ಪುಡಿ, ಉಪ್ಪಿನಕಾಯಿ ಸೇರಿದಂತೆ ಹಲವು ರೀತಿಯ ಆಹಾರ ಪದಾರ್ಥಗಳನ್ನು ಸಂಗ್ರಹಿಸಿದ್ದು, ಇದಲ್ಲದೆ ಸಂತ್ರಸ್ತರಿಗಾಗಿ ಬಟ್ಟೆ, ಹೊದಿಕೆ  ಸೇರಿದಂತೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದೆ. ರವಿವಾರ ಕೊಡಗಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು  ವಿಎಚ್‍ಪಿ  ಕಾರ್ಯದರ್ಶಿ ಎಂ.ಎಸ್.ಶ್ರೀಕಂಠಸ್ವಾಮಿ ತಿಳಿಸಿದ್ದಾರೆ.

ಸಂಘಟನೆಗಳ ಬೆಂಬಲ ಹಲಗೂರಿನ ಭಗತ್‍ಸಿಂಗ್ ಸೇನಾ ಸಮಿತಿ, ಭಜರಂಗ ದಳ, ಆರ್‍ಎಸ್‍ಎಸ್ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಹಿಳೆಯರು ಮತ್ತು ವ್ಯಾಪಾರಿಗಳು ಇದಕ್ಕೆ ಸಾಥ್ ನೀಡಿದ್ದು, ನೆರವು ನೀಡುವವರು ಮೊ.ನಂ 9886323020/ 9513000019/ 9448343494 ಸಂಪರ್ಕಿಸಲು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News