ಮಂಡ್ಯ: ನಗರಸಭೆ ಉಪಾಧ್ಯಕ್ಷೆ ಸುಜಾತಮಣಿ ಜೆಡಿಎಸ್ ಸೇರ್ಪಡೆ

Update: 2018-08-18 18:18 GMT

ಮಂಡ್ಯ, ಆ.19: ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸುಜಾತಮಣಿ ಕಾಂಗ್ರೆಸ್ ಪಕ್ಷ ತ್ಯಜಿಸಿ ಶಾಸಕ ಎಂ. ಶ್ರೀನಿವಾಸ್ ನೇತೃತ್ವದಲ್ಲಿ ಶನಿವಾರ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.

ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ನಾಲ್ಕು ಬಾರಿ ನಗರಸಭೆ ಸದಸ್ಯರಾಗಿದ್ದು, 20 ವರ್ಷಕ್ಕೂ ಹೆಚ್ಚು ಕಾಲದಿಂದ ಕಾಂಗ್ರೆಸ್ ಪಕ್ಷದಲ್ಲಿದ್ದ ಸುಜಾತಮಣಿ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ ಎಂದರು.

ಎಲ್ಲಾ 35 ವಾರ್ಡುಗಳಿಗೂ ಜೆಡಿಎಸ್ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಹೆಚ್ಚಿನ ಬಹುಮತ ನೀಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ನಗರಸಭೆಯ ಚುಕ್ಕಾಣಿ ಹಿಡಿಯಲು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು. 

ಜನರ ಮಧ್ಯೆ ಇರುವವರನ್ನೇ ಗುರುತಿಸಿ ಆಯ್ಕೆ ಮಾಡಿ ಕಣಕ್ಕಿಳಿಸಿದ್ದೇವೆ. ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ನಗರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಯಾಗಬೇಕಾದರೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಅವರು ಕೋರಿದರು.

ವಕೀಲ ಎಂ.ಬಿ. ಬಾಲಸುಂದರಂ ಪುತ್ರ ನಟರಾಜು ಅವರು ಕಾಂಗ್ರೆಸ್ ಪಕ್ಷ ತ್ಯೆಜಿಸಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜೆಡಿಎಸ್ ಸೇರ್ಪಡೆಗೊಂಡಿರುವ ಅವರು, ಎಲ್ಲಾ ಕಾರ್ಯಕರ್ತರೊಡಗೂಡಿ ಪಕ್ಷ ಸಂಘಟನೆಗೆ ಮುಂದಾಗುವುದಾಗಿ ತಿಳಿಸಿದ್ದಾರೆ ಎಂದು ಶ್ರೀನಿವಾಸ್ ಹೇಳಿದರು.

ಇದೇ ವೇಳೆ ಲೋಕೇಶ್, ಎಸ್.ಪಿ. ಗೌರೀಶ್, ಅರುಣಜ್ಯೋತಿ, ಸುರೇಶ್, ಗೋವಿಂದರಾಜು ಇತರ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News