ಕೊಡಗಿನಲ್ಲಿ ತಗ್ಗಿದ ಮಳೆ; ಮುಂದುವರಿದ ರಕ್ಷಣಾ ಕಾರ್ಯ, ಮಡಿಕೇರಿಗೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭ

Update: 2018-08-19 06:15 GMT

ಕೊಡಗು, ಆ.19: ಕೊಡಗಿನಲ್ಲಿ ರವಿವಾರ ಮಳೆ ಪ್ರಮಾಣ ತಗ್ಗಿದ್ದು, ಸಾಧಾರಣ ಮಳೆಯಾಗುತ್ತಿದೆ. ಈ ನಡುವೆ ರಕ್ಷಣಾ ಕಾರ್ಯ ಮುಂದುವರಿದಿದೆ. ಭಾರೀ ಮಳೆ ಮತ್ತು ಗುಡ್ಡ ಕುಸಿತದಿಂದ ಭಯಾನಕ ವಾತಾವರಣ ಸೃಷ್ಟಿಯಾಗಿರುವ ಕೊಡಗಿನಲ್ಲಿ ಅಪಾಯದಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಯೋಧರು, ಎನ್‌ಡಿಆರ್‌ಎಫ್ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. 

ಈ ನಡುವೆ ಬೆಂಗಳೂರು ಮತ್ತು ಮೈಸೂರಿನಿಂದ ಮಡಿಕೇರಿಗೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭವಾಗಿದೆ. 

ಪ್ರವಾಹದಿಂದ ರಕ್ಷಿಸಿಕೊಳ್ಳಲು ಮಕ್ಕಂದೂರು, ಮುಕ್ಲೋಡು ಸಹಿತ ಹಲವೆಡೆ ಗುಡ್ಡವೇರಿ ಕುಳಿತಿರುವ ಸುಮಾರು 175 ಮಂದಿ ಅಲ್ಲೇ ಬಾಕಿಯಾಗಿರುವ ಶಂಕೆ ವ್ಯಕ್ತವಾಗಿದೆ. ಅವರ ರಕ್ಷಣಾ ಕಾರ್ಯ ಮಳೆಯ ನಡುವೆಯೂ ಭರದಿಂದ ಸಾಗಿದೆ.

ಈ ನಡುವೆ ಬೆಂಗಳೂರು ಮತ್ತು ಮೈಸೂರಿನಿಂದ ಮಡಿಕೇರಿಗೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಶನಿವಾರ ರಾತ್ರಿಯಿಂದಲೇ ಆರಂಭವಾಗಿದೆ. ಬೆಂಗಳೂರು ಮತ್ತು ಮೈಸೂರಿನಿಂದ ಕುಶಾಲ ನಗರ ಮಾರ್ಗವಾಗಿ ಮಡಿಕೇರಿ, ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಸರಕಾರಿ ಬಸ್‌ಗಳು ಸಂಚರಿಸುತ್ತಿವೆ. ಆದರೆ ಮಂಗಳೂರಿನಿಂದ ಮಡಿಕೇರಿಗೆ ತಲುಪಲು ಅಸಾಧ್ಯವಾದ ಪರಿಸ್ಥಿತಿ ಇದೆ. ಈ ರಸ್ತೆ ಮಧ್ಯೆ ಹಲವೆಡೆ ಭೂಕುಸಿತದಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಪ್ರವಾಹ ಪೀಡಿತ ಪ್ರದೇಶವಾದ ಕುಶಾಲ ನಗರಕ್ಕೆ ವಿಧಾನ ಸಭಾ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಇಂದು ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅವರಿಗೆ ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಸಾಥ್ ನೀಡುತ್ತಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ನೆರೆ ಪ್ರದೇಶದಲ್ಲಿ ಸಿಲುಕಿದ್ದ ಎರಡು ತಿಂಗಳ ಹಸುಳೆಯೊಂದನ್ನು ರಕ್ಷಣಾ ಸಿಬ್ಬಂದಿಯು ಹಗ್ಗದ ನೆರವಿನಿಂದ ಸಾಹಸಮಯವಾಗಿ ರಕ್ಷಿಸಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News