ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿದೆ ಸೋಮವಾರಪೇಟೆ

Update: 2018-08-19 08:13 GMT

ಸೋಮವಾರಪೇಟೆ, ಆ.19: ತಾಲೂಕಿನ ಪುಷ್ಪಗಿರಿ ಬೆಟ್ಟದ ತಪ್ಪಲು ಪ್ರದೇಶದ ಜನಜೀವನ ಪ್ರಕೃತಿಯ ಮುನಿಸಿಗೆ ಸಿಲುಕಿ ನಲುಗಿ ಹೋಗಿದೆ. ಅಲ್ಲಲ್ಲಿ ಹತ್ತಾರು ಎಕರೆ ಪ್ರದೇಶ ಕುಸಿಯುತ್ತಿದ್ದು, ಬೆಟ್ಟಗಳೆ ಜರುಗಿ ಜನರನ್ನು ಬೀದಿ ಪಾಲನ್ನಾಗಿಸಿದೆ.

ಶಾಂತಳ್ಳಿ ಹೋಬಳಿಯ ಕುಮಾರಳ್ಳಿ, ಕೊತ್ತನಳ್ಳಿ, ಬಾಚಳ್ಳಿ, ಮಲ್ಲಳ್ಳಿ, ಬೀದಳ್ಳಿ, ಬೆಂಕಳ್ಳಿ, ಹೆಗ್ಗಡಮನೆ ಸೇರಿದಂತೆ ಇತರ ಗ್ರಾಮಗಳ ಜನಜೀವನ ಅಸ್ತವ್ಯಸ್ಥಗೊಂಡಿದೆ. ಕುಮಾರಳ್ಳಿ ಬಾಚಳ್ಳಿ ಗ್ರಾಮದಲ್ಲಿ 50 ಎಕರೆಯಷ್ಟು ಮಣ್ಣು ಕುಸಿದಿದ್ದು, ಗ್ರಾಮದ ರುದ್ರಪ್ಪ, ಮಾದಪ್ಪ, ಗೋಪಾಲ, ಮಾಚಯ್ಯ, ಸುಬ್ಬಯ್ಯ, ಚಿನ್ನಪ್ಪ, ಗಿರೀಶ, ಈರಪ್ಪ ಮತ್ತು ಕೋಡಳ್ಳಿ ಗ್ರಾಮದ ದೇವಯ್ಯ, ಗಣೇಶ, ಶಾಂತಮ್ಮ, ಚಂಗಪ್ಪಎಂಬವರ ಮನೆಗಳು ಕುಸಿಯುವ ಭೀತಿ ಎದುರಾಗಿದೆ. ಈ ಕುಟುಂಬಗಳನ್ನು ಕುಮಾರಳ್ಳಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಭಾರೀ ಭೂ ಕುಸಿತದಿಂದ ಕೋಡಳ್ಳಿ ಗ್ರಾಮ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾನಿಗೀಡಾಗಿ ನದಿಪಾಲಾಗಿದೆ. ಮಾದಯ್ಯ, ಸುರೇಶ, ಹರೀಶ, ದೇವಕ್ಕಿ, ಮಾಚಮ್ಮ ಎಂಬವರಿಗೆ ಸೇರಿದ ಸುಮಾರು 50 ಎಕರೆ ತೋಟ ಹಾಗೂ ಗದ್ದೆ ಭೂ ಕುಸಿತಕ್ಕೊಳಗಾಗಿದೆ. ಈ ಭಾಗದ ಜನರು ತೀರಾ ನಿರಾಶ್ರಿತರಾಗಿದ್ದು, ಮಕ್ಕಳು, ವಯೋವೃದ್ಧರ ಸ್ಥಿತಿ ಚಿಂತಾಜನಕವಾಗಿದೆ. ಮುಂದಿನ ಒಂದೆರಡು ದಿನಗಳಲ್ಲಿ ಮಳೆ ಇಳಿಮುಖವಾಗದಿದ್ದರೆ ಸಂಪೂರ್ಣ ಗ್ರಾಮ ನೆರೆಯಲ್ಲಿ ಕೊಚ್ಚಿ ಹೋಗುವ ಭೀತಿ ಇದೆ ಎಂದು ಗ್ರಾಮಾಧ್ಯಕ್ಷ ಚಂಗಪ್ಪಆತಂಕ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ತೆರೆಯಲಾಗಿರುವ ಗಂಜಿ ಕೇಂದ್ರದಲ್ಲಿ ಶಾಂತಳ್ಳಿ ನಾಡ ಕಚೇರಿಯ ಕಂದಾಯ ನಿರೀಕ್ಷಕ ನಾಗೇಂದ್ರ, ಗ್ರಾಮ ಲೆಕ್ಕಿಗ ಉಮೇಶ್ ಅವರು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ್ದು, ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಉದ್ಯಮಿ ಹರಪಳ್ಳಿ ರವೀಂದ್ರ ಬೆಡ್‌ಶೀಟ್, ಸ್ವೆಟ್ಟರ್, ಉಲ್ಲನ್ ಟೋಪಿ, ಶಾಲು ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಿದ್ದಾರೆ.

ಮಾಜಿ ಶಾಸಕ ಎಸ್.ಜಿ.ಮೇದಪ್ಪ, ತಾಪಂ ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್, ಒಕ್ಕಲಿಗ ಯುವ ಬ್ರಿಗೇಡ್‌ನ ಅಧ್ಯಕ್ಷ ಗಿರೀಶ್ ಮಲ್ಲಪ್ಪ ಭೇಟಿ ನೀಡಿ ನಿರಾಶ್ರಿತರಿಗೆ ನೆರವು ಒದಗಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News