ಕೊಡಗು ಮಹಾಮಳೆ: 500 ಗ್ರಾಮಸ್ಥರನ್ನು ರಕ್ಷಿಸಿದ ಸೈನಿಕರು

Update: 2018-08-19 13:08 GMT

ಮಡಿಕೇರಿ,ಆ.19 :ಮಹಾಮಳೆಯಿಂದ ತೀವ್ರ ಹಾನಿಗೊಳಗಾಗಿರುವ ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಸೈನ್ಯದ ನೆರವಿನೊಂದಿಗೆ ಕ್ಷಿಪ್ರ ಕಾರ್ಯಾಚರಣೆ ನಡೆಯುತ್ತಿದ್ದು, ಇಲ್ಲಿಯವರೆಗೆ ಸುಮಾರು 400 ರಿಂದ 500 ಮಂದಿಯನ್ನು ರಕ್ಷಿಸಲಾಗಿದೆ.

ಮುಕ್ಕೂಡ್ಲುವಿನ ವ್ಯಾಲಿ ಡ್ಯೂ ರೆಸಾರ್ಟ್‍ನಲ್ಲಿ 90 ಮಂದಿ ಗ್ರಾಮೀಣರು ಸಿಲುಕಿದ್ದು, ಇವರ ರಕ್ಷಣೆಗಾಗಿ ಡೋಗ್ರಾ ರೆಜಿಮೆಂಟಿನ ಸೈನಿಕರು, ಗರುಡ ಪಡೆ ಕಾರ್ಯ ನಿರತವಾಗಿವೆ. ವಣಚಲುವಿನಲ್ಲಿ 12 ಮಂದಿ ಸಿಲುಕಿಕೊಂಡಿದ್ದು, ಇವರ ರಕ್ಷಣೆಗೂ ಕ್ರಮ ಕೈಗೊಳ್ಳಲಾಗುತ್ತಿದೆ.

ಎಡಿಜಿಪಿ ಭಾಸ್ಕರ ರಾವ್ ಅವರು ನೀಡಿರುವ ಮಾಹಿತಿಯಂತೆ ರಕ್ಷಣಾ ಕೊಡಗಿಗೆ ಗರುಡ ರಕ್ಷಣಾ ಪಡೆ, ಸೈನ್ಯದ ತುಕಡಿ, ಎನ್‍ಡಿಆರ್ ಎಫ್ ತಂಡಗಳು ಮುಕ್ಕೋಡ್ಲು ವಿಭಾಗದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.ದೇವಸ್ತೂರು ಗ್ರಾಮದಲ್ಲಿ ಸಂಕಷ್ಟದಲ್ಲಿ ಸಿಲುಕಿ, ಮನೆ ತೊರೆಯಲು ನಿರಾಕರಿಸಿದ್ದ ವೃದ್ಧರೊಬ್ಬರನ್ನು ರಕ್ಷಿಸಲಾಗಿದೆ. ಜಿಲ್ಲೆಯ ಮೈಸೂರು ರಸ್ತೆ ಹೊರತುಪಡಿಸಿದಂತೆ ಉಳಿದ ಮುಖ್ಯ ರಸ್ತೆಗಳು ಸಂಪೂರ್ಣ ಕಡಿತವಾಗಿದ್ದು, ಮಂಗಳೂರನ್ನು ಸಂಪರ್ಕಿಸುವ ರಸ್ತೆಯ ಜೋಡುಪಾಲದಲ್ಲಿ ಗುಡ್ಡ ಕುಸಿತದಿಂದ ರಸ್ತೆಗಳೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಶೀಘ್ರ ರಸ್ತೆ ಮಣ್ಣು ತೆರವು ಕಾರ್ಯಾಚರಣೆಯೂ ನಡೆಯಲಿದೆ ಎಂದು ತಿಳಿಸಿದರು. 

ಜಿಲ್ಲೆಯ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯ ಗಾಮೀಣ ಭಾಗಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದ್ದು, ಈಗಾಗಲೆ ಸೇನೆಯ ನೆರವಿನೊಂದಿಗೆ ಕ್ಷಿಪ್ರಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿಯವರೆಗೆ 400 ರಿಂದ 500 ಮಂದಿಯನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ.

ಪುನರ್ವಸತಿ ಕೇಂದ್ರಗಳ ಸಂತ್ರಸ್ತರ ಅನುಕೂಲಕ್ಕಾಗಿ 119 ತಾತ್ಕಾಲಿಕ ಶೌಚಾಲಯಗಳನ್ನು ಒದಗಿಸಲು ಈಗಾಗಲೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ 46 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 2 ಸಾವಿರಕ್ಕೂ ಹೆಚ್ಚಿನ ಸಂತ್ರಸ್ತರಿಗೆ ತಾತ್ಕಾಲಿಕ ನೆಲೆಯನ್ನು ಒದಗಿಸಲಾಗಿದೆಯೆಂದು ಮಾಹಿತಿ ನೀಡಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News