×
Ad

ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-08-19 18:11 IST

ಬೆಂಗಳೂರು/ಮಡಿಕೇರಿ, ಆ.19: ಪಿರಿಯಾಪಟ್ಟಣದಿಂದ ಮಡಿಕೇರಿಗೆ ಹೋಗುವ ಮಾರ್ಗದಲ್ಲಿ ಆವರ್ತಿ, ಕುಶಾಲನಗರದ ಸಾಯಿ ಬಡಾವಣೆ, ಕುವೆಂಪು ಬಡಾವಣೆಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರವಿವಾರ ಸಂತ್ರಸ್ತರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಸಾಯಿ ಬಡಾವಣೆಯಲ್ಲಿ 150-200 ಮನೆಗಳು ಹಾಗೂ ಕುವೆಂಪು ಬಡಾವಣೆಯಲ್ಲಿ ಸುಮಾರು 400 ಮನೆಗಳು ಜಲಾವೃತವಾಗಿದ್ದು, ಸಂತ್ರಸ್ತರಿಗೆ ಎಲ್ಲ ಅಗತ್ಯ ನೆರವು ಕಲ್ಪಿಸುವುದಾಗಿ ಮುಖ್ಯಮಂತ್ರಿ ಸಾಂತ್ವನ ನುಡಿದರು.

ನಂತರ ಶುಂಟಿಕೊಪ್ಪದ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಎರಡು ಸಾವಿರಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ಕೊಡಗು ಜಿಲ್ಲೆ ರಾಜ್ಯದಲ್ಲಿ ಅತ್ಯಂತ ವಿಶಿಷ್ಟ ಸ್ಥಾನ ಪಡೆದ ಜಿಲ್ಲೆ. ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ತನ್ನದೇ ಛಾಪು ಮೂಡಿಸಿದೆ ಎಂದರು.
ವೀರ ಯೋಧರ ಕೊಡುಗೆ ನೀಡಿದ ಜಿಲ್ಲೆ ಇದು. ಇಂತಹ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಹಾಗೂ ಭೂ ಕುಸಿತದಿಂದ ದುರಂತ ಸಂಭವಿಸಿರುವುದು ಅತ್ಯಂತ ದುರದೃಷ್ಟಕರ. ರಾಜ್ಯ ಸರಕಾರವು ಕೊಡಗಿನ ಜನರ ರಕ್ಷಣೆ ಹಾಗೂ ಪುನರ್ವಸತಿ ಕಲ್ಪಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಿದೆ. ಯಾರೂ ಆತಂಕ ಪಡಬೇಕಾಗಿಲ್ಲ ಎಂದು ಅವರು ಅಭಯ ನೀಡಿದರು.

ಅಗತ್ಯ ಸಂದರ್ಭದಲ್ಲಿ ನಿಯಮಗಳನ್ನು ಸಡಿಲಿಸಿ ಪುನರ್ವಸತಿ ಕ್ರಮ ಕೈಗೊಳ್ಳಲಾಗುವುದು. ನಿನ್ನೆ ಕೊಡಗಿನ ಭಾಗಶಃ ಸಮೀಕ್ಷೆ ನಡೆಸಲಷ್ಟೇ ಸಾಧ್ಯವಾಯಿತು. ಈ ಹಿನ್ನೆಲೆಯಲ್ಲಿ ಇಂದು ನಿಗಡಿಯಾಗಿದ್ದ ಶಿವಮೊಗ್ಗ, ಚಿಕ್ಕಮಗಳೂರು ಭೇಟಿ ರದ್ದು ಪಡಿಸಿ ಮತ್ತೆ ಕೊಡಗಿಗೆ ಭೇಟಿ ನೀಡಿರುವುದಾಗಿ ಮುಖ್ಯಮಂತ್ರಿ ತಿಳಿಸಿದರು.

ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿ: ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಕೊಡಗಿನಲ್ಲಿ ಸುಮಾರು ಒಂದು ಗಂಟೆ 15 ನಿಮಿಷಗಳ ಕಾಲ ವೈಮಾನಿಕ ಸಮೀಕ್ಷೆ ನಡೆಸಿದರು. ಇಂದು ಅವರು ಮೈಸೂರು ವಿಮಾನ ನಿಲ್ದಾಣದಿಂದ ಹೊರಟು ಸೋಮವಾರಪೇಟೆ, ಶುಂಠಿ ಕೊಪ್ಪ, ಮಾದಾಪುರ, ಮುಕ್ಕೋಡ್ಲು, ಹಾರಂಗಿ ಹಿನ್ನೀರು ಪ್ರದೇಶ, ಸಿದ್ದಾಪುರ, ಕುಶಾಲನಗರ ಸುತ್ತಮುತ್ತಲಿನ ಪ್ರದೇಶಗಳ ಸಮೀಕ್ಷೆ ನಡೆಸಿದರು. ನಂತರ ಪಿರಿಯಾಪಟ್ಟಣ ಹೆಲಿಪ್ಯಾಡ್‌ನಲ್ಲಿ ಇಳಿದು ಮಡಿಕೇರಿಗೆ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News