×
Ad

ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ಥರನ್ನು ಭೇಟಿಯಾದ ಸಿಎಂ ಕುಮಾರಸ್ವಾಮಿ

Update: 2018-08-19 20:55 IST

ಸುಂಟಿಕೊಪ್ಪ,ಆ.19: ಜಲ ಪ್ರಳಯದಿಂದ ನಿರಾಶ್ರಿತರಾಗಿ ಇಲ್ಲಿನ ವಿವಿಧ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ಥರನ್ನು ರವಿವಾರ ಭೇಟಿ ಮಾಡಿ, ಅವರ ಸಂಕಷ್ಟವನ್ನು ಆಲಿಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಂತ್ರಸ್ತರಿಗೆ ಎಲ್ಲಾ ರೀತಿಯ ಸೌಲಭ್ಯವನ್ನು ಸರಕಾರದಿಂದ ದೊರಕಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.

ಪುನರ್ವಸತಿ ಕೇಂದ್ರದಲ್ಲಿರುವವರಿಗೆ ಶೌಚಾಲಯದ ಕೊರತೆ ಇದೆ. ಸರಿಯಾದ ಆಹಾರ, ಚಿಕಿತ್ಸೆ ನೀಡಬೇಕು ಶಾಶ್ವತ ಸೂರು ಒದಗಿಸಬೇಕೆಂದು ಎಂದು ಸಂತ್ರಸ್ತರು ಮುಖ್ಯಮಂತ್ರಿ ಕೋರಿದರು. ಅಲ್ಲದೆ ಸರಕಾರದಿಂದ ಯಾವುದೇ ನೆರವು ಇದುವರೆಗೆ ದೊರೆಯಲಿಲ್ಲ ಎಂದು ದೂರಿದರು.

ಸುಂಟಿಕೊಪ್ಪದ ನಾಗರಿಕರು ನೆರೆ ಹಾವಳಿಯಿಂದ ನಮ್ಮನ್ನು ರಕ್ಷಿಸಿ ಆಶ್ರಯ ಕಲ್ಪಿಸಿ ಜಿಲ್ಲೆ ಹಾಗೂ ರಾಜ್ಯದ ಜನತೆಯ ಸಹಕಾರದಿಂದ ನಮಗೆ ಆಹಾರ ಮತ್ತು ವಸ್ತ್ರಗಳು ಲಭಿಸಿದ್ದು, ಇಲ್ಲಿ ಯಾವುದೇ ಕೊರತೆ ಬಾರದ ರೀತಿಯಲ್ಲಿ ನೆರವು ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭ ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾತನಾಡಿ, ಕೊಡಗಿನಲ್ಲಿ ಜಲ ಪ್ರಳಯದಿಂದ ಬಹಳಷ್ಟು ಮಂದಿ ಮನೆ ಮಠ ಅಸ್ತಿ ಪಾಸ್ತಿಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅವರಿಗೆ ಅದಷ್ಟು ಶೀಘ್ರ ಶಾಶ್ವತ ನೆರವಿನ ಅವಶ್ಯಕತೆ ಇದೆ ಎಂದು ಮನವಿ ಮಾಡಿದರು.

ಈ ಸಂದರ್ಭ ಮುಖ್ಯಮಂತ್ರಿ ಕುಮಾರಸ್ವಾಮಿ, ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರುಗಳು ಎಲ್ಲಾ ರೀತಿಯ ಸೌಲಭ್ಯವನ್ನು ಕಲ್ಪಿಸಿಕೊಡಬೇಕೆಂದು  ಸೋಮವಾರಪೇಟೆ ತಹಶೀಲ್ದಾರ್ ಅವರಿಗೆ ಆದೇಶ ನೀಡಿದರು.

ಈ ಸಂದರ್ಭ ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ, ಪಂಚಾಯಿತಿ ಸದಸ್ಯರಾದ ಕೆ.ಇ.ಕರೀಂ, ನಾಗರತ್ನ, ಮಾಜಿ ಸದಸ್ಯ ಹನೀಫ್,  ರಾಜ್ಯ ಜಾತ್ಯತೀತ ಜನತಾದಳ ಉಪಾಧ್ಯಕ್ಷ ಎಂ.ಎಂ.ಶರೀಫ್, ಜಿಲ್ಲಾಧಿಕಾರಿ ಶ್ರೀವಿದ್ಯಾ, ಡಿಜಿಪಿ ಭಾಸ್ಕರ ರಾವ್, ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್, ಕಂದಾಯ ಪರಿವೀಕ್ಷಕ ಶಿವಪ್ಪ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News