×
Ad

ಕೊಡಗು: ನಾಲ್ಕು ಸಾವಿರ ಗ್ರಾಮಸ್ಥರು ಸಂಪರ್ಕದಲ್ಲೇ ಇಲ್ಲ; 50,000 ಮಂದಿ ಸಂಕಷ್ಟದಲ್ಲಿ

Update: 2018-08-19 21:16 IST

ಮಡಿಕೇರಿ,ಆ.19 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ನೆರೆ ಸಂತ್ರಸ್ತರಿಗಾಗಿ ತೆರೆಯಲಾಗಿರುವ 41 ಪುನರ್ ವಸತಿ ಕೇಂದ್ರಗಳಲ್ಲಿ 5,818 ಮಂದಿ ಆಶ್ರಯ ಪಡೆದಿದ್ದಾರೆ. ಮುಂಗಾರಿನ ಆರ್ಭಟದಿಂದ ಸಂಭವಿಸಿರುವ ಪ್ರಾಕೃತಿಕ ವಿಕೋಪಗಳಿಂದ 4,000 ಮಂದಿ ಸಂಪರ್ಕ ಕಳೆದುಕೊಂಡಿದ್ದು, 50,000 ಕ್ಕೂ ಅಧಿಕ ಮಂದಿ ತೊಂದರೆಗೆ ಸಿಲುಕಿದ್ದಾರೆ. 

ಮಡಿಕೇರಿ  ತಾಲೂಕಿನಲ್ಲಿ 18 ಪುನರ್ ವಸತಿ ಕೇಂದ್ರಗಳಲ್ಲಿ 2277 ಸಂತ್ರಸ್ಥರು, ವಿರಾಜಪೇಟೆ  ತಾಲೂಕಿನಲ್ಲಿ 7 ಕೇಂದ್ರಗಳಲ್ಲಿ 677, ಸೋಮವಾರಪೇಟೆ ತಾಲೂಕಿನ 16 ಕೇಂದ್ರಗಳಲ್ಲಿ 2864 ನಿರಾಶ್ರಿತರಿದ್ದಾರೆ. 

ಭಾರತೀಯ ಸೇನಾ ಪಡೆ ಮುಕ್ಕೋಡ್ಲು ಗ್ರಾಮದಲ್ಲಿ ಅಪಾಯದಂಚಿನ ಗ್ರಾಮದಲ್ಲಿರುವ ಜನರನ್ನು ರಕ್ಷಿಸುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಜೋಡುಪಾಲ, ಎರಡನೇ ಮೊಣ್ಣಂಗೇರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ನೌಕಾದಳ ದೇವಸ್ತೂರು, ಕಾಲೂರು ಗ್ರಾಮಗಳಲ್ಲಿ ಸಂತ್ರಸ್ಥರ ರಕ್ಷಣೆಯಲ್ಲಿದೆ. ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ತಂಡ ತಂತಿಪಾಲದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದೆ.

ಮುಕ್ಕೋಡ್ಲು ಗ್ರಾಮದಲ್ಲಿ ರವಿವಾರ ಸೇನಾ ಪಡೆ 60 ಮಂದಿ ಗ್ರಾಮಸ್ಥರನ್ನು ರಕ್ಷಿಸಿದೆ. ಮನೆ ಕಳೆದುಕೊಂಡವರು ಗುರುತಿನ ಚೀಟಿ ಸೇರಿದಂತೆ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ರಸ್ತೆ ಸಂಪರ್ಕವಿಲ್ಲದೇ ಜಿಲ್ಲೆಯಾದ್ಯಂತ ಪುನರ್ ವಸತಿ ಕೇಂದ್ರಗಳಿಗೆ ಪರಿಹಾರ ಸಾಮಾಗ್ರಿ ರವಾನಿಸುವುದೇ ಕಷ್ಟವಾಗಿದೆ. 

ಬೆಳೆ ಹಾನಿ, ಆಸ್ತಿ ಹಾನಿ ಸಂಬಂಧ ವಿವಿಧ ಇಲಾಖೆಗಳು ಜಂಟಿ ಸಮೀಕ್ಷೆ ಕೈಗೊಳ್ಳಲಿದೆ ಎಂದು ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News