ಕೊಡಗಿನಲ್ಲಿ ಕಾರ್ಯಾಚರಣೆಗೆ ಮಳೆ ಅಡ್ಡಿ : ಶಾಲೆಗಳಿಗೆ ಆ.20, 21ರಂದು ರಜೆ

Update: 2018-08-19 16:22 GMT

ಮಡಿಕೇರಿ, ಆ.19 :ಮಹಾಮಳೆಯಿಂದ ತತ್ತರಿಸಿ ಹೋಗಿರುವ ಕೊಡಗು ಜಿಲ್ಲೆಯಲ್ಲಿ ಶನಿವಾರ ಕೊಂಚ ಬಿಡುವು ನೀಡಿದ್ದ ಮಳೆ ರವಿವಾರ ತೀವ್ರಗೊಂಡಿದೆ. ಪ್ರವಾಹ ಸಂಭವಿಸಬಹುದಾದ ರೀತಿಯಲ್ಲಿ ಮಳೆ ಬಾರದಿದ್ದರೂ ಉತ್ತಮ ಮಳೆ ಸುರಿಯುತ್ತಿದೆ. ಸಂಕಷ್ಟಕ್ಕೆ ಸಿಲುಕಿರುವ ಗ್ರಾಮಸ್ಥರ ರಕ್ಷಣಾ ಕಾರ್ಯಕ್ಕೆ ಮಳೆ ಅಡ್ಡಿಯಾಗಿದೆ. ಮಕ್ಕಂದೂರು ಭಾಗದಲ್ಲಿ ಗುಡ್ಡ ಕುಸಿಯುತ್ತಿರುವ ಘಟನೆ ಮುಂದುವರೆದಿದೆ. 

ಶಾಲೆಗಳಿಗೆ ರಜೆ 
ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಸಂತ್ರಸ್ಥರು ಆಶ್ರಯ ಪಡೆದಿರುವುದರಿಂದ ಮತ್ತು ಮಳೆ ಮುಂದುರೆದಿರುವುದರಿಂದ ಆ.20 ಮತ್ತು 21 ರಂದು ಎರಡು ದಿನ ಶಾಲಾ, ಕಾಲೇಜು, ಅಂಗನವಾಡಿಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. 

ಪ್ರವಾಸಿಗರಿಗೆ ತಂಗಲು ಅವಕಾಶವಿಲ್ಲ
ಪ್ರವಾಸಿಗರ ಹಿತದೃಷ್ಟಿಯಿಂದ ಆ.31 ರವರೆಗೆ ಜಿಲ್ಲೆಯ ಯಾವುದೇ ರೆಸಾರ್ಟ್, ಹೋಂಸ್ಟೇ, ಹೊಟೇಲ್, ಲಾಡ್ಜ್ ಹಾಗೂ ಖಾಸಗಿ ವಸತಿ ಗೃಹಗಳಲ್ಲಿ ಪ್ರವಾಸಿಗರ ವಾಸ್ತ್ಯವವನ್ನು ಕಡ್ಡಾಯವಾಗಿ ರದ್ದುಪಡಿಸಿ ಜಿಲ್ಲಾಡಳಿತ ಆದೇಶಿಸಿದೆ.

ರವಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 55.13 ಮಿ.ಮೀ. ಕಳೆದ ವರ್ಷ ಇದೇ ದಿನ 34.75 ಮಿ.ಮೀ., ಜನವರಿಯಿಂದ ಇಲ್ಲಿಯವರೆಗಿನ ಮಳೆ 3535.16 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1436.06 ಮಿ.ಮೀ ಮಳೆಯಾಗಿತ್ತು.                              

ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 77.50 ಮಿ.ಮೀ. ಕಳೆದ ವರ್ಷ ಇದೇ ದಿನ 52.80 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 4972.18 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2069.30 ಮಿ.ಮೀ. ಮಳೆಯಾಗಿತ್ತು.     

ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 38.53 ಮಿ.ಮೀ. ಕಳೆದ ವರ್ಷ ಇದೇ ದಿನ 18.23 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2767.77 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1139.98 ಮಿ.ಮೀ. ಮಳೆಯಾಗಿತ್ತು.   

ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 49.37 ಮಿ.ಮೀ.ಕಳೆದ ವರ್ಷ ಇದೇ ದಿನ 33.22 ಮಿ.ಮೀ ಜನವರಿಯಿಂದ ಇಲ್ಲಿಯವರೆಗಿನ ಮಳೆ 2865.54 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1098.91 ಮಿ.ಮೀ. ಮಳೆಯಾಗಿತ್ತು.   

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:ಮಡಿಕೇರಿ ಕಸಬಾ 93.40, ನಾಪೋಕ್ಲು 62.80, ಸಂಪಾಜೆ 66.80, ಭಾಗಮಂಡಲ 87, ವಿರಾಜಪೇಟೆ ಕಸಬಾ 45, ಹುದಿಕೇರಿ 69, ಶ್ರೀಮಂಗಲ 75, ಪೊನ್ನಂಪೇಟೆ 16.20, ಅಮ್ಮತಿ 13, ಬಾಳೆಲೆ 13, ಸೋಮವಾರಪೇಟೆ ಕಸಬಾ 53.20, ಶನಿವಾರಸಂತೆ 47.80, ಶಾಂತಳ್ಳಿ 105.60, ಕೊಡ್ಲಿಪೇಟೆ 26.40, ಕುಶಾಲನಗರ 23.20, ಸುಂಟಿಕೊಪ್ಪ 40 ಮಿ.ಮೀ. ಮಳೆಯಾಗಿದೆ.       

ಹಾರಂಗಿ ಜಲಾಶಯದ ನೀರಿನ ಮಟ್ಟ 
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2851.72 ಅಡಿಗಳು, ಕಳೆದ ವರ್ಷ ಇದೇ ದಿನ 2855.23 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 35.60 ಮಿ.ಮೀ. ಕಳೆದ ವರ್ಷ ಇದೇ ದಿನ 32.80 ಮಿ.ಮೀ. ಇಂದಿನ ನೀರಿನ ಒಳಹರಿವು 23313 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 2590 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 22813 ಕ್ಯುಸೆಕ್. ನಾಲೆಗೆ 500 ಕ್ಯುಸೆಕ್.   

ಸಂತ್ರಸ್ಥರಿಗೆ ತಕ್ಷಣ ವಸತಿ ಕಲ್ಪಿಸಲು ಅಧಿಕಾರಿಗಳ ನಿಯೋಜನೆ 
ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಲ್ಲಿ ಸುರಿದ ಧಾರಾಕಾರ ಮಳೆಗೆ ಅತಿವೃಷ್ಟಿಗೆ ಒಳಗಾದವರನ್ನು ರಕ್ಷಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ. 

ಆ ನಿಟ್ಟಿನಲ್ಲಿ ವಿವಿಧ ಭಾಗಗಳಿಗೆ ಉನ್ನತ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಪರಹಾರ ಕೇಂದ್ರ ಸೇರಿದಂತೆ ಯಾವುದೇ ರೀತಿಯ ಕುಂದು ಕೊರೆತೆಗಳಿಗೆ ಸಂಬಂಧಿಸಿದಂತೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. 

ಮಡಿಕೇರಿ ತಾಲ್ಲೂಕಿಗೆ ಸಂಬಂಧಿಸಿದಂತೆ ವಸತಿ ಇಲಾಖೆಯ ಆಯುಕ್ತರಾದ ಅನ್ಬುಕುಮಾರ್ (9449892000), ಕುಶಾಲನಗರ ವ್ಯಾಪ್ತಿಗೆ ಎಡಿಜಿಪಿ ಭಾಸ್ಕರ ರಾವ್ (9980915100), ವಿರಾಜಪೇಟೆ ತಾಲ್ಲೂಕಿಗೆ ಸಂಬಂಧಿಸಿದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತಾರಾಜು (94565486110 ಇವರನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.  

ಅತಿವೃಷ್ಟಿ ಸಂಬಂಧ ರಾಜ್ಯ ವಿವಿಧ ಭಾಗಗಳಿಂದ ಪರಿಹಾರ ಕೇಂದ್ರಗಳಿಗೆ ಆಹಾರ ಸೇರಿದಂತೆ ಹಲವು ರೀತಿಯ ಸಾಮಾಗ್ರಿಗಳು ಬರುತ್ತಿದೆ. ಆ ದಿಸೆಯಲ್ಲಿ ಆಹಾರ ಸೇರಿದಂತೆ ಯಾವುದೇ ರೀತಿಯ ಸಾಮಾಗ್ರಿ/ ವಸ್ತುಗಳನ್ನು ನಗರದ ಜಿಲ್ಲಾಡಳಿತ ಭವನದ ನೆಲ ಮಹಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮಿಗೆ ನೇರವಾಗಿ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಬಸವರಾಜು (8105204059), ಶ್ರೀಷ (9972995353), ಮಲ್ಲೇಶ್ (9743168840)ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News