ಸಂತ್ರಸ್ತರಿಗೆ ದಾವಣಗೆರೆ ಸಹಕಾರ ಬ್ಯಾಂಕ್‌ಗಳ ಒಕ್ಕೂಟದಿಂದ 1 ಕೋ. ರೂ. ನೆರವು

Update: 2018-08-19 18:21 GMT

ದಾವಣಗೆರೆ, ಆ.19: ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟು ನಷ್ಟವುಂಟಾಗಿದ್ದು, ಸಂತ್ರಸ್ತರಿಗೆ ನೆರವಾಗುವ ದೃಷ್ಟಿಯಿಂದ ದಾವಣಗೆರೆ ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕ್‌ಗಳ ಒಕ್ಕೂಟದಿಂದ 1 ಕೋಟಿ ರೂ.ನ್ನು ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಗೌರವ ಅಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ. ಒಕ್ಕೂಟದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟು ಸಾವು-ನೋವುಗಳಾಗಿದ್ದು, ಇದಕ್ಕೆ ಪರಿಹಾರವಾಗಿ ಈಗಾಗಲೇ ಸಾಕಷ್ಟು ಜನತೆಗೆ ಸಹಾಯ ಹಸ್ತ ಚಾಚಿದ್ದು, ಈ ನಿಟ್ಟಿನಲ್ಲಿ ನಾವು ಕೂಡ ಒಕ್ಕೂಟದ ವತಿಯಿಂದ ತಲಾ 50 ಲಕ್ಷ ರೂ.ನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ನೀಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಈ ಹಿಂದೆಯೂ ಸಹ ಒಕ್ಕೂಟದಿಂದ ಭೂಕಂಪ, ಕಾರ್ಗಿಲ್ ಯುದ್ಧ ಹಾಗೂ ಪ್ರಕೃತಿ ವಿಕೋಪಗಳು ನಡೆದ ವೇಳೆ ನೆರವು ನೀಡಲಾಗಿದ್ದು, ಇದೀಗ1 ಕೋ. ನೀಡುತ್ತಿದ್ದೇವೆ ಎಂದರು.

ವೈಯಕ್ತಿಕವಾಗಿ 25 ಲಕ್ಷ ರೂ.: ಒಕ್ಕೂಟದಿಂದ 1 ಕೋಟಿ ರೂ. ನೀಡುವುದರ ಜೊತೆಗೆ ತಮ್ಮ ವೈಯಕ್ತಿಕವಾಗಿ 25 ಲಕ್ಷ ರೂ.ನ್ನು ನೀಡುವುದಾಗಿ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಇದೇ ವೇಳೆ ಒಕ್ಕೂಟದ ಗೌರವ ಕಾರ್ಯದರ್ಶಿಗಳನ್ನಾಗಿ ಎನ್‌ಎಂಜೆಬಿ ಮುರುಗೇಶ್ ಅವರನ್ನು ಅವಿರೋಧವಾಗಿ ನೇಮಿಸಲಾಯಿತು. ಈ ಹಿಂದೆ ಒಕ್ಕೂಟದ ಗೌರವ ಕಾರ್ಯದರ್ಶಿಗಳಾಗಿದ್ದ ಎನ್‌ಎಂಜೆಬಿ ಆರಾಧ್ಯ ಅವರ ನಿಧನದಿಂದ ಸ್ಥಾನ ತೆರವಾಗಿತ್ತು. ಈ ಸಭೆಯಲ್ಲಿ ಒಕ್ಕೂಟದ ಕಾರ್ಯಾಧ್ಯಕ್ಷ ಬಿ.ಸಿ. ಉಮಾಪತಿ, ನೂತನ ಗೌರವ ಕಾರ್ಯದರ್ಶಿ ಎನ್‌ಎಂಜೆಬಿ ಮುರುಗೇಶ್, ಸದಸ್ಯರಾದ ಎಸ್.ಎಸ್.ಮಲ್ಲಿಕಾರ್ಜುನ್, ಕೋಗುಂಡಿ ಬಕ್ಕೇಶಪ್ಪ, ಕಿರುವಾಡಿ ಸೋಮಶೇಖರ್, ಎನ್.ಜೆ.ಗುರುಸಿದ್ದಯ್ಯ, ಆರ್.ಎಲ್.ಪ್ರಭಾಕರ್, ಕುರ್ಕಿ ಕುಬೇರಪ್ಪ, ರಮಣ್ ಲಾಲ್, ಆರ್.ಜಿ.ಶ್ರೀನಿವಾಸ ಮೂರ್ತಿ, ಸಿ.ಚಂದ್ರಶೇಖರ್, ಬಿ.ಎಲ್.ಗೌಡ, ನಿರಂಜನ್ ನಿಶಾನಿಮಠ, ಜ್ಯೋತಿ ಪ್ರಕಾಶ್, ಡಿ.ವಿ.ಆರಾಧ್ಯಮಠ, ಅಶೋಕ್ ರಾಯಬಾಗಿ, ಶಿವಶಂಕರ್, ಮಂಜುನಾಥ್,ಎಂ.ಬಸವರಾಜ್ ಮತ್ತಿತರರಿದ್ದರು.

ಒಕ್ಕೂಟದ ಸದಸ್ಯ ಬ್ಯಾಂಕ್‌ಗಳು: ಬಾಪೂಜಿ ಬ್ಯಾಂಕ್, ದಾವಣಗೆರೆ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್, ದಾವಣಗೆರೆ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್, ಶಿವ ಕೋ- ಆಪರೇಟಿವ್ ಬ್ಯಾಂಕ್, ಕನ್ನಿಕಾ ಪರಮೇಶ್ವರಿ ಕೋ- ಆಪರೇಟಿವ್ ಬ್ಯಾಂಕ್, ಕನಕ ಕೋ- ಆಪರೇಟಿವ್ ಬ್ಯಾಂಕ್, ಸಿಟಿ ಕೋ- ಆಪರೇಟಿವ್ ಬ್ಯಾಂಕ್. ಅಂಭಾಭವಾನಿ ಕೋ- ಆಪರೇಟಿವ್ ಬ್ಯಾಂಕ್, ಮುರುಘರಾಜೇಂದ್ರ ಕೋ- ಆಪರೇಟಿವ್ ಬ್ಯಾಂಕ್,ಮಿಲ್ಲತ್ ಕೋ- ಆಪರೇಟಿವ್ ಬ್ಯಾಂಕ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News