ಸಸಿ ನೆಡುವ ನೆಪದಲ್ಲಿ ಲಕ್ಷಾಂತರ ರೂ. ಅವ್ಯವಹಾರಕ್ಕೆ ಸಿದ್ಧತೆ: ಗಿರೀಶ ಎಸ್.ದೇವರಮನಿ ಆರೋಪ

Update: 2018-08-19 18:28 GMT

ದಾವಣಗೆರೆ, ಆ.19: ಸಸಿ ನೆಡುವ ಹೆಸರಿನಲ್ಲಿ ಲಕ್ಷಾಂತರ ರೂ. ಅವ್ಯವಹಾರದ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ರದ್ಧುಪಡಿಸುವಂತೆ ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ ಎಸ್.ದೇವರಮನಿ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ ಸಾಮಾನ್ಯರ ಸೇವಾ ಸಂಸ್ಥೆಯ ಪ್ರಸನ್ನ ಬೆಳಕೇರಿ, ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ 2018 ಜುಲೈ 27ರಂದು ಇ-ಟೆಂಡರ್ ಆಹ್ವಾನಿಸಿದ್ದು, ಟೆಂಡರ್‌ನಲ್ಲಿ ಸೂಚಿಸಿದ ಸ್ಥಳಗಳಲ್ಲಿ ಈಗಾಗಲೇ ಸಸಿ ನೆಡಲಾಗಿದೆ ಎಂದರು.

ಈಗಾಗಲೇ ಸಸಿ ನೆಟ್ಟಿರುವ ಸ್ಥಳಗಳಲ್ಲೇ ಹೊಸದಾಗಿ ಸಸಿ ನೆಡುವ ಹೆಸರಿನಲ್ಲಿ 82.08 ಲಕ್ಷ ರೂ.ಗೆ ಟೆಂಡರ್ ಕರೆದಿದ್ದು, ಟೆಂಡರ್ ಕರೆದಿರುವ ಹಿಂದೆ ಅರಣ್ಯ ಇಲಾಖೆ ಅಧಿಕಾರಿಗಳೇ ಸಸಿ ನೆಡುವ ಕೆಲಸ ಮುಗಿಸಿ, ಬೇರೆಯವರ ಹೆಸರಿನಲ್ಲಿ ಇ-ಟೆಂಡರ್ ಮಾಡಿಕೊಳ್ಳಲು ಯೋಜಿಸಿದ್ದಾರೆ. ಇದು ಸಂಪೂರ್ಣ ಕಾನೂನು ಬಾಹಿರ ಕೆಲಸವಾಗಿದೆ ಎಂದು ದೂರಿದರು. ಸಸಿಗಳನ್ನು ನೆಟ್ಟಿರುವ ಸ್ಥಳಗಳ ಹೆಸರಿನಲ್ಲೇ ಮತ್ತೆ ಹೊಸದಾಗಿ ಇ-ಟೆಂಡರ್ ಕರೆದಿದ್ದು, ಆ.20ರಂದು ಟೆಂಡರ್ ಪ್ರಕ್ರಿಯೆಗೆ ಅಂತಿಮ ದಿನ. ಈ ಹಿನ್ನೆಲೆಯಲ್ಲಿ ಇಡೀ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳು ತಕ್ಷಣ ತಡೆ ಹಿಡಿಯಲಿ ಎಂದು ಅವರು ಆಗ್ರಹಿಸಿದರು.

ದಾವಣಗೆರೆ, ಹೊನ್ನಾಳಿ, ಹರಪನಹಳ್ಳಿ, ಜಗಳೂರು ತಾಲೂಕಿನಲ್ಲಿ 82,08,500 ರೂ. ವೆಚ್ಚದಲ್ಲಿ ಗಿಡ ನೆಡುವ ಕಾಮಗಾರಿಗೆ ಇ-ಟೆಂಡರನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ಕರೆಯಲಾಗಿದೆ. ಮೇಲ್ನೋಟಕ್ಕೆ ಸಸಿ ನೆಟ್ಟಿರುವಲ್ಲೇ ಮತ್ತೆ ಸಸಿ ನೆಡಲು ಟೆಂಡರ್ ಕರೆದಿದ್ದನ್ನು ಗಮನಿಸಿದರೆ ಸಾಕಷ್ಟು ಭ್ರಷ್ಟಾಚಾರ, ಹಗರಣವಾಗುವ ಸ್ಪಷ್ಟ ಲಕ್ಷಣ ಗೋಚರಿಸುತ್ತಿವೆ. ಈ ಬಗ್ಗೆ ಸಾಕಷ್ಟು ಅನುಮಾನಗಳೂ ಕಾಡುತ್ತವೆ ಎಂದು ಅವರು ತಿಳಿಸಿದರು.

ಇ-ಟೆಂಡರ್ ಪ್ರಕ್ರಿಯೆ ರದ್ಧುಪಡಿಸುವಂತೆ, ಇ-ಟೆಂಡರ್ ಕಾಮಗಾರಿ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ, ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಇ-ಟೆಂಡರ್ ಪ್ರಕ್ರಿಯೆ ಹಿಂಪಡೆದಿಲ್ಲ. ಆ.20ರವರೆಗೆ ಇ-ಟೆಂಡರ್ ಹಾಕಲು ಅವಕಾಶವಿದ್ದು, ಅರಣ್ಯ ಇಲಾಖೆ ಟೆಂಡರ್ ಕರೆದ ಸ್ಥಳಗಳಲ್ಲಿ ಈಗಾಗಲೇ ಸಸಿ ನೆಡಲಾಗಿದೆ. ಇ-ಟೆಂಡರ್ ಎಂಬುದು ಕೇವಲ ನಾಮಕಾವಸ್ತೆಗಷ್ಟೇ ಎಂಬುದೂ ಸ್ಪಷ್ಟವಾಗುತ್ತದೆ ಎಂದು ಅರೋಪಿಸಿದರು.

ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳೇ ಸಸಿ ನೆಡೆಸಿ, ತಮ್ಮ ಕಡೆಯವರಿಂದ ಡಮ್ಮಿ ಟೆಂಡರ್‌ಗಳನ್ನು ಹಾಕಿಸಿದ್ದಾರೆ. ಒಂದು ವೇಳೆ ಟೆಂಡರ್ ಪ್ರಕ್ರಿಯೆ ಅವಕಾಶ ಮಾಡಿಕೊಟ್ಟರೆ ಸಾರ್ವಜನಿಕರು ತೆರಿಗೆ ರೂಪದಲ್ಲಿ ಕಟ್ಟಿದ್ದ ಲಕ್ಷಾಂತರ ರೂ. ದುರುಪಯೋಗವಾಗುವ ಸಾಧ್ಯತೆ ಇದೆ. ಅಲ್ಲದೇ, ಈಗಾಗಲೇ ಸಸಿ ನೆಟ್ಟ ಸ್ಥಳಗಳನ್ನು ಜಿಪಿಆರ್‌ಎಸ್ ಮೂಲಕ ಸ್ಥಳ, ಸಮಯದ ಸಮೇತ ನಾವು ಸಾಬೀತುಪಡಿಸುತ್ತೇವೆ. ಯಾವುದೇ ಕಾರಣಕ್ಕೂ ದುಡ್ಡು ಕೊಳ್ಳೆ ಹೊಡೆಯಲು ಅವಕಾಶ ನೀಡೆವು ಎಂದು ಅವರು ಹೇಳಿದರು.

ರಾಜ್ಯಾದ್ಯಂತ ಗಿಡ ನೆಡುವ ಹೆಸರಿನಲ್ಲಿ ವಿವಿಧ ಇಲಾಖೆಗಳಿಂದ ಗೋಲ್‌ಮಾಲ್ ನಡೆದಿರುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಇ-ಟೆಂಡರ್ ಲೂಟಿ ಮಾಡಲು ದಾರಿ ಮಾಡಿಕೊಟ್ಟಂತಾಗಿದ್ದು, ಜಿಪಿಆರ್‌ಎಸ್ ಮೂಲಕ ಎಲ್ಲಾ ಗಿಡಗಳ ಫೋಟೋಗಳನ್ನೂ ಜಿಲ್ಲಾಡಳಿತಕ್ಕೆ, ಸೋಷಿಯಲ್ ಮೀಡಿಯಾ ಮೂಲಕ ಕಳಿಸಿದ್ದೇವೆ. ಈ ಬಗ್ಗೆ ಡಿಸಿ ಕ್ರಮ ಕೈಗೊಂಡು, ಟೆಂಡರ್ ಪ್ರಕ್ರಿಯೆ ರದ್ಧುಪಡಿಸಲಿ. ಉದಾಸೀನ ಮಾಡಿದರೆ, ಕಾನೂನು ಹೋರಾಟಕ್ಕೆ ನಾವು ಸಜ್ಜಾಗಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಅವರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕರುನಾಡ ಕನ್ನಡ ಸೇನೆ ಕೆ.ಟಿ.ಗೋಪಾಲಗೌಡ, ಆರ್.ಬಿ.ಹನುಮಂತಪ್ಪ, ಪರಿಸರ ಸಂರಕ್ಷಣಾ ವೇದಿಕೆಯ ಪವನ್ ರೇವಣಕರ್, ಪ್ರದೀಪ, ಮಲ್ಲಿಕಾರ್ಜುನ ಇಂಗಳೇಶ್ವರ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News