ಮಾನವೀಯತೆಯನ್ನು ತಟ್ಟಿ ಎಚ್ಚರಿಸಿದ ನೆರೆ

Update: 2018-08-20 05:36 GMT

ಕೊಡಗು, ಕೇರಳದಲ್ಲಿ ಮಳೆ ತುಸು ಇಳಿಮುಖವಾಗಿದೆಯಾದರೂ, ಅದರ ದುಷ್ಪರಿಣಾಮಗಳು ಮಾತ್ರ ಹೆಚ್ಚುತ್ತಿವೆ. ತುಂಬಿ ಹರಿಯುತ್ತಿರುವ ನೀರಿನ ಕಾರಣದಿಂದಾಗಿ ಈವರೆಗೆ ತೀರಾ ಒಳ ಪ್ರದೇಶಗಳಿಗೆ ತಲುಪುವುದು ಕಷ್ಟವಾಗಿತ್ತು. ಹಲವು ಪ್ರದೇಶಗಳು ಸಂಪರ್ಕಕ್ಕೆ ಸಿಕ್ಕಿಲ್ಲದೇ ಇರುವುದರಿಂದ ಸಾವು ನೋವುಗಳನ್ನು ಲೆಕ್ಕ ಹಾಕುವುದು ಕಷ್ಟವಾಗುತ್ತಿತ್ತು. ಇದೀಗ ನಿಧಾನಕ್ಕೆ ನೀರು ಇಳಿಯುತ್ತಿದೆ. ಸಂಪರ್ಕಗಳು ತೆರೆಯುತ್ತಿವೆ. ಹಾನಿಗೀಡಾದ ಪ್ರದೇಶಗಳ ನಿಜವಾದ ಚಿತ್ರಣ ಹಂತಹಂತವಾಗಿ ದೊರಕ ತೊಡಗಿವೆ. ಸದ್ಯಕ್ಕೆ ಈ ನೆರೆಯಿಂದಾಗಿ ಮೃತಪಟ್ಟ ವ್ಯಕ್ತಿಗಳ ಸಂಖ್ಯೆಯನ್ನು ಅಂದಾಜಿಸುವುದು ಸುಲಭವಿಲ್ಲ. ತೀರಾ ಒಳ ಪ್ರದೇಶಗಳಲ್ಲಿ ಸಂಭವಿಸಿದ ನಾಶ ನಷ್ಟವನ್ನು ಕಲ್ಪಿಸುವುದು ಕೂಡ ಅಸಾಧ್ಯ. ನೂರಾರು ಜನರು ನಾಪತ್ತೆಯಾಗಿದ್ದಾರೆ. ಇವರು ಮೃತಪಟ್ಟಿದ್ದಾರೆಯೇ, ಅಥವಾ ಸಂಪರ್ಕ ಕಳೆದುಕೊಂಡಿದ್ದಾರೆಯೇ ಎನ್ನುವುದು ಸ್ಪಷ್ಟವಿಲ್ಲ. ಕೇರಳದಲ್ಲಿ 15,000 ಕೋಟಿ ರೂಪಾಯಿಗೂ ಅಕ ನಷ್ಟ ಸಂಭವಿಸಿದೆ ಎಂದು ಅಲ್ಲಿನ ಸರಕಾರ ಹೇಳಿಕೆ ನೀಡಿದೆ. ಸ್ಥಳ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿಯವರು ತುರ್ತು ಪರಿಹಾರವಾಗಿ 500 ಕೋಟಿ ರೂಪಾಯಿಯನ್ನು ಘೋಷಿಸಿದ್ದಾರೆ. 

ಆದರೆ ಕೇರಳ ಸರಕಾರ 2000 ಕೋಟಿ ರೂಪಾಯಿಯನ್ನು ಕೇಳಿದೆ. ಕನಿಷ್ಠ ಒಂದು ಸಾವಿರ ಕೋಟಿ ರೂಪಾಯಿಯನ್ನು ತುರ್ತು ಪರಿಹಾರವಾಗಿ ನೀಡುವುದು ಕೇಂದ್ರ ಸರಕಾರದ ಹೊಣೆಗಾರಿಕೆಯಾಗಿದೆ. ಯಾಕೆಂದರೆ ತಕ್ಷಣಕ್ಕೆ ಈ ಪರಿಹಾರ ತಲುಪದೇ ಇದ್ದರೆ, ಸಾವು ನೋವುಗಳ ಸಂಖ್ಯೆ, ಅನಾಹುತಗಳ ಸಂಖ್ಯೆ ಇನ್ನಷ್ಟು ಹೆಚ್ಚಬಹುದು. ಇತ್ತ ಕೊಡಗಿನ ನಾಶನಷ್ಟವೂ ದೊಡ್ಡ ಪ್ರಮಾಣದಲ್ಲಿದೆ. ಮಲೆನಾಡು, ಕೊಡಗು ಹಾಗೂ ಕರಾವಳಿಯಲ್ಲಿ ಮಳೆ ಹಾನಿಗೆ 15,000 ಕೋಟಿ ರೂಪಾಯಿಗೂ ಅಕ ನಷ್ಟವುಂಟಾಗಿದೆ ಎಂದು ಹೇಳಲಾಗಿದೆ. ಕಂದಾಯ ಇಲಾಖೆ, 7,500 ಕೋಟಿ ರೂಪಾಯಿ ನಷ್ಟವನ್ನು ಅಂದಾಜಿಸಿದೆಯಾದರೂ, ನಾಶ ನಷ್ಟಗಳ ಸ್ಪಷ್ಟ ವಿವರ ಇನ್ನಷ್ಟೇ ಸಿಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಷ್ಟದ ಮೊತ್ತ ಹೆಚ್ಚಬಹುದು ಎಂದು ಸರಕಾರ ಹೇಳಿದೆ. ಇಂತಹ ಹೊತ್ತಿನಲ್ಲಿ ಕೇಂದ್ರ ಸರಕಾರದ ಹೊಣೆಗಾರಿಕೆ ಅತೀ ದೊಡ್ಡದಿದೆ. ದಕ್ಷಿಣ ಭಾರತದ ಬಗ್ಗೆ ಕೇಂದ್ರ ಸರಕಾರ ನಿರ್ಲಕ್ಷ ವಹಿಸುತ್ತಿದೆ ಎನ್ನುವ ಆರೋಪ ಮೊದಲೇ ಇದೆ. ಇದಕ್ಕೆ ಪೂರಕವಾಗಿ, ಕೇಂದ್ರ ಸರಕಾರ ನಿಧಾನಗತಿಯಲ್ಲಿ ಕೇರಳ ಮತ್ತು ಕರ್ನಾಟಕದ ದುರಂತಕ್ಕೆ ಸ್ಪಂದಿಸುತ್ತಿದೆ . ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿರದೇ ಇರುವುದರಿಂದ ದುರಂತದಲ್ಲಿ ಕೇಂದ್ರ ರಾಜಕೀಯ ಆಟ ಆಡುತ್ತಿದೆ ಎಂದು ಜನರು ದೂರತೊಡಗಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು, ರಾಜಧರ್ಮ ಪಾಲಿಸಬೇಕಾಗಿದೆ. ಹೆಚ್ಚು ಮುತುವರ್ಜಿಯಿಂದ ಪರಿಹಾರದ ಕಡೆಗೆ ಗಮನ ನೀಡಬೇಕಾಗಿದೆ.

  ಕೇಂದ್ರದ ನಾಯಕರು ಒಂದನ್ನು ನೆನಪಿನಲ್ಲಿಡಬೇಕು. ಸರಕಾರ ಜನೋಪಯೋಗಿಯಲ್ಲದ ಸ್ಮಾರಕಗಳಿಗಾಗಿ ಕೋಟಿಗಟ್ಟಲೆ ಖರ್ಚು ಮಾಡುತ್ತಿದೆ. ಶಿವಾಜಿ ಪಾರ್ಕ್‌ಗಾಗಿ ಸುಮಾರು 4,000 ಕೋಟಿ ರೂಪಾಯಿಯನ್ನು ಖರ್ಚು ಮಾಡುತ್ತಿದ್ದರೆ, ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗಾಗಿಯೂ ಹಲವು ಸಹಸ್ರ ಕೋಟಿ ವೆಚ್ಚ ಮಾಡಲು ಮುಂದಾಗಿದೆ. ಈ ದೇಶದ ಜನರು ಪ್ರಕೃತಿ ವಿಕೋಪಕ್ಕೆ ಸಿಲುಕಿ ತತ್ತರಿಸಿರುವಾಗ, ಅವುಗಳಿಗೆ ತುರ್ತು ಪರಿಹಾರವಾಗಿ ಹಣ ನೀಡಲು ಹಿಂದೇಟು ಹಾಕುವುದು ಅಮಾನವೀಯವಾಗಿದೆ. ಶಿವಾಜಿ, ಸರ್ದಾರ್ ವಲಭಭಾಯಿ ಪಟೇಲ್ ಇವರನ್ನು ಜನರು ನೆನಪಿಟ್ಟುಕೊಳ್ಳಲು ಸಹಸ್ರಾರು ಕೋಟಿ ರೂಪಾಯಿ ಖರ್ಚು ಮಾಡಿ ಸ್ಮಾರಕಮಾಡಬೇಕಾಗಿಲ್ಲ. ದಲಿತರು, ಬುಡಕಟ್ಟು ಜನರು ಮತ್ತು ಮುಸ್ಲಿಮರನ್ನು ಸಂಘಟಿಸಿ ಶಿವಾಜಿ ಮೊಗಲರನ್ನು ಎದುರಿಸಿದ. ಆತನ ಬದುಕು, ಸೌಹಾರ್ದ, ಶೌರ್ಯಗಳನ್ನು ನೆನಪಿಡುವಂತೆ ಒಂದು ದೊಡ್ಡ ಲೈಬ್ರರಿಯನ್ನು ತೆರೆದರೂ ಸಾಕು. ಪಟೇಲ್ ಕುರಿತಂತೆಯೂ ಇದನ್ನೇ ಮಾಡಬೇಕಾಗಿದೆ.

ಒಂದು ದೇಶದ ಜನರು ಸಾವು ನೋವುಗಳ ಜೊತೆಗೆ ಚೀತ್ಕಾರ ಮಾಡುತ್ತಿರುವಾಗ ಈ ನಿರ್ಜೀವ ಪ್ರತಿಮೆಗಳಿಗೆ ವ್ಯಯ ಮಾಡುವ ಸರಕಾರಕ್ಕೆ ದೇಶದ ಅಭಿವೃದ್ಧಿಯ ಕಲ್ಪನೆಯೇ ಇಲ್ಲ ಎಂದು ಭಾವಿಸಬೇಕಾಗುತ್ತದೆ. ಆದುದರಿಂದ, ಸ್ಮಾರಕಗಳಿಗಾಗಿ ಅನಗತ್ಯ ವೆಚ್ಚ ಮಾಡುವ ಹಣವನ್ನು ಪ್ರಕೃತಿ ವಿಕೋಪಗಳಿಂದಾದ ನಾಶ ನಷ್ಟಗಳನ್ನು ತುಂಬಲು ಸರಕಾರ ಬಳಸಬೇಕು. ತನ್ನ ಸ್ವಯಂಕೃತಾಪರಾಧಗಳ ಕಾರಣಗಳಿಂದಲೇ ನಾಶ ನಷ್ಟಗಳನ್ನು ಮನುಷ್ಯ ಇಂದು ಅನುಭವಿಸುತ್ತಿದ್ದಾನೆ. ಆದರೆ ಇದೇ ಸಂದರ್ಭದಲ್ಲಿ, ಈ ದುರಂತಕ್ಕೆ ನೆರೆಗಿಂತಲೂ ವೇಗವಾಗಿ ಜನರು ಮಾನವೀಯತೆಯಿಂದ ಸ್ಪಂದಿಸುತ್ತಿರುವುದು ಆಶಾದಾಯಕ ಸಂಗತಿಯಾಗಿದೆ. ನೆರೆಯು ಮನುಷ್ಯನೊಳಗೆ ನಿದ್ದೆ ಹೋಗಿದ್ದ ಮಾನವೀಯತೆಯನ್ನು ತಟ್ಟಿ ಎಬ್ಬಿಸುವುದಕ್ಕಾಗಿಯೇ ಆಗಮಿಸಿತೋ ಎನ್ನುವಂತೆ ಸಂಕಷ್ಟಕ್ಕೀಡಾಗಿರುವವರ ಜೊತೆಗೆ ಜನರು ಕೈ ಜೋಡಿಸುತ್ತಿದ್ದಾರೆ. ಸರಕಾರ ಘೋಷಿಸಿದ ಪರಿಹಾರಕ್ಕಿಂತಲೂ, ಜನಸಾಮಾನ್ಯರು ಬೀದಿಗಿಳಿದು ಸಂಗ್ರಹಿಸಿದ ಪರಿಹಾರ ಹಣವೇ ಸಂತ್ರಸ್ತರಿಗೆ ಅತಿ ಹೆಚ್ಚು ನೆರವಾಗುತ್ತಿದೆ. ಕೊಡಗಿಗೆ ಪೂರೈಕೆಯಾಗಿರುವ ಆಹಾರ ಸಾಮಗ್ರಿಗಳು ಎಷ್ಟೆಂದರೆ ‘‘ಸದ್ಯಕ್ಕೆ ಬೇಡ’’ ಎಂದು ಅಕಾರಿಗಳೇ ಮನವಿ ಮಾಡುವಷ್ಟು.

ಕೇರಳದಲ್ಲೂ ಸಂತ್ರಸ್ತರ ನೆರವಿಗೆ ಪ್ರಾಣ ಒತ್ತೆಯಿಟ್ಟು ವಿವಿಧ ಸಂಘಟನೆಗಳ ಕಾರ್ಯಕರ್ತರು ದುಡಿಯುತ್ತಿದ್ದಾರೆ. ಪಕ್ಷ, ಜಾತಿ, ಧರ್ಮ ಇತ್ಯಾದಿಗಳೆಲ್ಲ ಈ ನೆರೆಯಲ್ಲಿ ಕೊಚ್ಚಿ ಹೋಗಿವೆ. ಸಂತ್ರಸ್ತನ ಧರ್ಮವನ್ನು ಗುರುತಿಸಿ ಯಾರೂ ನೆರವನ್ನು ನೀಡುವುದಿಲ್ಲ ಅಥವಾ ನೆರವು ನೀಡುವ ಕಾರ್ಯಕರ್ತನ ಜಾತಿ, ಧರ್ಮವನ್ನು ಯಾರೂ ನೋಡುವುದಿಲ್ಲ. ವೈದ್ಯರು, ಶಿಕ್ಷಕರು, ಕಲಾವಿದರು, ಕಾರ್ಮಿಕರು, ಎಲ್ಲ ವರ್ಗದ ಜನರೂ ತಮ್ಮ ತಮ್ಮ ಮಿತಿಯಲ್ಲಿ ಹಣ ಸಹಾಯ ನೀಡುತ್ತಿದ್ದಾರೆ. ಹಾಗೆಯೇ ವಿವಿಧ ಸಂಘಟನೆಗಳ ಕಾರ್ಯಕತರು ಗುಂಪಾಗಿ ನೆರೆ ಪೀಡಿತ ಸ್ಥಳಕ್ಕೆ ತೆರಳಿ ಅವರಿಗಾದ ಮಟ್ಟಿಗೆ ಅಳಿಲು ಸೇವೆ ಮಾಡುತ್ತಿದ್ದಾರೆ. ನಮ್ಮ ದೇಶದ ಯೋಧರಂತೂ ಈ ಪ್ರಕೃತಿ ವಿಕೋಪದ ವಿರುದ್ಧ ವೀರಾವೇಶದಿಂದ ಹೋರಾಡುತ್ತಿದ್ದಾರೆ. ನಿಜಕ್ಕೂ ಇದೊಂದು ಯುದ್ಧವೇ ಸರಿ. ಯಾವುದೋ ಶತ್ರು ರಾಷ್ಟ್ರಗಳು ಆಕ್ರಮಣ ಮಾಡಿದಾಗ ಒಂದಾಗುವ ನಾವು, ದೇಶದೊಳಗೆ ವಿಪತ್ತು ಸಂಭವಿಸಿದಾಗಲೂ ಅಷ್ಟೇ ತೀವ್ರವಾಗಿ ಒಂದಾಗಬಲ್ಲೆವು ಎನ್ನುವುದನ್ನು ಜನರು ತೋರಿಸಿಕೊಟ್ಟಿದ್ದಾರೆ. ಕೊಲ್ಲಿ ರಾಷ್ಟ್ರಗಳೂ ಈ ದುರಂತಕ್ಕೆ ಸ್ಪಂದಿಸಿವೆ.

ಬಕ್ರೀದ್ ಸಿದ್ಧತೆ ನಡೆಸುತ್ತಿದ್ದ ಮುಸ್ಲಿಮರು ಕೊಂಡು ಕೊಂಡ ಹೊಸಬಟ್ಟೆಯನ್ನೇ ನೆರೆಪೀಡಿತ ಜನರಿಗಾಗಿ ಕಳುಹಿಸಿಕೊಟ್ಟಿರುವುದು ಮಾಧ್ಯಮಗಳಲ್ಲಿ ವರದಿಯಾಗಿವೆ. ಹಲವರು ಕುರ್ಬಾನಿಗಾಗಿ ಮೀಸಲಿಟ್ಟ ಹಣವನ್ನು ನೆರೆ ಸಂತ್ರಸ್ತರ ಪರಿಹಾರ ನಿಗೆ ನೀಡಿದ್ದಾರೆ. ಇವುಗಳ ನಡುವೆಯೂ ದುಷ್ಟ ಶಕ್ತಿಗಳು ಜನರನ್ನು ವಿಭಜಿಸಲು ಅಲ್ಲಲ್ಲಿ ಪ್ರಯತ್ನಿಸಿದ್ದನ್ನು ನಾವು ನೋಡಿದ್ದೇವೆ. ಸಂತ್ರಸ್ತರಲ್ಲೂ ಹಿಂದೂ-ಮುಸ್ಲಿಮ್ ಎಂದು ಗುರುತಿಸಿದ ಸಂಘಪರಿವಾರದ ಜನರು ನಮ್ಮ ನಡುವೆ ಇದ್ದಾರೆ. ಪರಿಹಾರ ಶಿಬಿರದಲ್ಲಿ ದಲಿತರನ್ನು ದೂರವಿಟ್ಟ ಮನಸ್ಸುಗಳೂ ಇವೆ. ಗೋಮಾಂಸ ಸೇವಿಸಿದ್ದಕ್ಕಾಗಿ ಕೇರಳಕ್ಕೆ ನೆರೆ ಬಂತು, ಶಬರಿ ಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ್ದ್ದಕ್ಕಾಗಿ ನೆರೆ ಬಂತು ಎಂಬ ಹೇಳಿಕೆಗಳನ್ನು ನೀಡುತ್ತಿರುವ ಸಣ್ಣ ಗುಂಪನ್ನು ನಾವೆಲ್ಲ ನಿರ್ಲಕ್ಷಿಸಿ ಒಂದಾಗಿ ಮುಂದೆ ಹೋಗಬೇಕಾಗಿದೆ. ಈ ನೆರೆ ನಮಗೆ ಕಲಿಸಿಕೊಟ್ಟ ಮಾನವೀಯತೆಯ ಪಾಠ ನೆರೆ ಇಳಿದ ಬಳಿಕವೂ ಉಳಿಯಬೇಕಾಗಿದೆ. ನೆರೆಯಿಂದ ತತ್ತರಿಸಿದ ಪ್ರದೇಶಗಳನ್ನು ಸಹಜ ಸ್ಥಿತಿಗೆ ತರಲು ಹಲವು ವರ್ಷ ಬೇಕಾಗಬಹುದು. ನೆರೆ ಇಳಿದು ಪರಿಸ್ಥಿತಿ ತಣ್ಣಗಾದ ಬಳಿಕ ಸಂತ್ರಸ್ತರನ್ನು ತಿರುಗಿ ನೋಡದ ಸ್ಥಿತಿ ನಿರ್ಮಾಣವಾಗಬಹುದು. ನಾವು ನೀಡಿದ ಪರಿಹಾರ ಹಣ ಅರ್ಹ ಸಂತ್ರಸ್ತರಿಗೆ ತಲುಪಿದೆಯೋ, ಅವರ ಸ್ಥಿತಿ ಗತಿ ಈಗ ಹೇಗಿದೆ ಎನ್ನುವುದರ ಬಗ್ಗೆ ಗಮನ ಕೊಡುವುದೂ ನಮ್ಮ ಕರ್ತವ್ಯವಾಗುತ್ತದೆ. ಇಲ್ಲವಾದರೆ, ನೆರೆ ಸಂತ್ರಸ್ತರ ಹೆಸರಲ್ಲಿ ಇನ್ಯಾರೋ ಹಬ್ಬ ಮಾಡುವ ಸಾಧ್ಯತೆಗಳಿರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News