ಕೊಳ್ಳೇಗಾಲ: ಪ್ರವಾಹ ಭೀತಿ ಎದುರಿಸುತ್ತಿರುವ ಹಲವು ಗ್ರಾಮಗಳು

Update: 2018-08-20 12:34 GMT

ಕೊಳ್ಳೇಗಾಲ,ಆ.20: ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಬಿಟ್ಟಿರುವ ಕಾರಣದಿಂದಾಗಿ ತಾಲೂಕಿನ ನದಿ ಪಾತ್ರದ ಗ್ರಾಮಗಳು ಪ್ರವಾಹದ ಭೀತಿ ಎದುರಿಸುತ್ತಿದೆ.

ತಾಲೂಕಿನ ದಾಸನಪುರ ಗ್ರಾಮದಲ್ಲಿ ದಿಢೀರನೇ ನೀರು ಹೆಚ್ಚಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಹಲವಾರು ಜಮೀನುಗಳು ಹಾಗೂ ಮನೆಗಳು ಜಲಾವೃತಗೊಂಡಿವೆ. ಹಳೇ ಅಣಗಳ್ಳಿ, ಹಳೇಹಂಪಾಪುರ, ಮುಳ್ಳೂರು, ದಾಸನಪುರ ಹಾಗೂ ಸತ್ತೇಗಾಲದ ಎಡಕುರಿಯ ಗ್ರಾಮಗಳಲ್ಲಿನ ಜಮೀನುಗಳು ಜಲಾವೃತಗೊಂಡು ಕಬ್ಬು, ಜೋಳ, ಭತ್ತ, ರಾಗಿ, ಸೇರಿದಂತೆ ರೈತರು ಬೆಳೆದಿದ್ದ ಸಾವಿರಾರು ಎಕರೆಯ ಜಮೀನುಗಳು ಮುಳುಗಡೆಯಾಗಿದೆ. ಇನ್ನೊಂದು ಕಡೆ ಹರಳೆ ಗ್ರಾಮದಿಂದ ದಾಸನಪುರ ಗ್ರಾಮಕ್ಕೆ ಹಾದು ಹೋಗುವ ರಸ್ತೆ ಸಂಪೂರ್ಣ ನೀರಿನಿಂದ ಜಲಾವೃತಗೊಂಡು ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ತುಂಬಾ ತೊಂದರೆಯುಂಟಾಗುತ್ತಿದೆ.  

ದಾಸನಪುರ ಗ್ರಾಮದವರು ತುಂಬಿ ಹರಿಯುತ್ತಿರುವ ಕಾವೇರಿ ನೀರನ್ನು ಲೆಕ್ಕಿಸದೇ ನೀರು ಹೊತ್ತು ತರುತ್ತಿದ್ದಾರೆ. ಪ್ರವಾಹ ಸ್ಥಿತಿ ನಿರ್ಮಾಣವಾದರೂ ಸಹ ಕುಡಿಯಲು-ಅಡುಗೆ ಮಾಡಲು ನದಿ ನೀರನ್ನೇ ಆಶ್ರಯಿಸಬೇಕಿರುವುದರಿಂದ ಮಹಿಳೆಯರು ನದಿಗಿಳಿಯುತ್ತಿದ್ದಾರೆ. ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ರಾತ್ರಿಯ ವೇಳೆ ಇನ್ನೂ ಹೆಚ್ಚುವ ನಿರೀಕ್ಷೆಯಿದೆ. ಇದಕ್ಕೆ ಪೂರಕವಗಿ ಜಿಲ್ಲಾಡಳಿತವು ಗ್ರಾಮಾಂತರ ಜನರಿಗೆ ಮುಂಜಾಗ್ರತೆ ಕ್ರಮವಾಗಿ ಅಗತ್ಯ ಕ್ರಮ ವಹಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News