ಕೊಡಗಿನಲ್ಲಿ ಕಡಿಮೆಯಾದ ವರುಣನ ಅಬ್ಬರ: ಮುಕ್ಕೋಡ್ಲು ಗ್ರಾಮದಲ್ಲಿ 2 ಮೃತದೇಹ ಪತ್ತೆ

Update: 2018-08-20 13:05 GMT

ಮಡಿಕೇರಿ, ಆ.20: ಕೊಡಗು ಜಿಲ್ಲೆಯಲ್ಲಿ ವರುಣನ ಅಬ್ಬರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದರೂ, ಮಡಿಕೇರಿ ತಾಲೂಕು ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮವಾರವೂ ಮಳೆಯಾಗಿದೆ. ಬಿಡುವು ನೀಡಿ ಸಾಧಾರಣ ಮಳೆಯಾಗುತ್ತಿರುವುದರಿಂದ ಜನತೆ ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಹಾನಿಯ ಪ್ರಮಾಣ ಏರುತ್ತಲೇ ಇದ್ದು, ಭೂಕುಸಿತ ಹಾಗೂ ಪ್ರವಾಹದಿಂದ ಸಂತ್ರಸ್ತರಾಗಿರುವವರ ರಕ್ಷಣಾ ಕಾರ್ಯ ಸೋಮವಾರವೂ ಮುಂದುವರೆದಿದೆ.  

ಮುಕ್ಕೋಡ್ಲು ಗ್ರಾಮದಲ್ಲಿ ತಾಯಿ- ಮಗನ ಮೃತದೇಹ ಕೋರೆಯಲ್ಲಿ ಪತ್ತೆಯಾಗಿದೆ. ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಎನ್‍ಡಿಆರ್ ಎಫ್ ಸಿಬ್ಬಂದಿಗಳು ಸೋಮವಾರ ಮುಕ್ಕೋಡ್ಲು ಗ್ರಾಮದಲ್ಲಿ ನಿರಾಶ್ರಿತರಿಗಾಗಿ ಶೋಧ ನಡೆಸುತ್ತಿದ್ದ ಸಂದರ್ಭ ಗ್ರಾಮದ ನಿವಾಸಿಗಳಾದ ಲೀಲಾವತಿ ಹಾಗೂ ಅವರ ಪುತ್ರ ಉಮೇಶ್ ಎಂಬವರ ಮೃತದೇಹವನ್ನು ಗ್ರಾಮದ ಕೋರೆಯೊಂದರಲ್ಲಿ ಪತ್ತೆ ಹಚ್ಚಿದ್ದಾರೆ. ಇವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಕೋರೆಗೆ ಬಿದ್ದಿದ್ದಾರೆಯೇ ಅಥವಾ ಜೀವ ರಕ್ಷಣೆಗಾಗಿ ಓಡುವ ಸಂದರ್ಭ ಕೋರೆಗೆ ಬಿದ್ದು ಸಾವಿಗೀಡಾಗಿದ್ದಾರೆಯೇ ಎಂಬುದು ದೃಢಪಟ್ಟಿಲ್ಲ.

ಕಳ್ಳರ ಭಯ
ಈ ನಡುವೆ ಜೀವ ಭಯದಿಂದ ಮನೆ ತೊರೆದು ಪರಿಹಾರ ಶಿಬಿರಗಳಲ್ಲಿ ನೆಲೆಸಿರುವವರ ಮನೆಗಳಿಗೆ ಕಳ್ಳರು ನುಗ್ಗಿರುವ ಪ್ರಕರಣವೂ ವರದಿಯಾಗಿದ್ದು, ಮಡಿಕೇರಿ ತಾಲೂಕಿನ ಜೋಡುಪಾಲ ಗ್ರಾಮದ ಕೆಲವು ಮನೆಗಳ ಹೆಂಚು ತೆಗೆದು ಒಳನುಗ್ಗಿ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಭಾಗಕ್ಕೆ ದಕ್ಷಿಣ ಕನ್ನಡದಿಂದ ಸಂಪಾಜೆ ಮೂಲಕ ಮಾತ್ರ ಆಗಮಿಸಲು ಅವಕಾಶವಿರುವುದರಿಂದ ಇದೀಗ ಸಂಪಾಜೆ ಗೇಟ್ ಮೂಲಕ ಬರುವ ಎಲ್ಲಾ ವಾಹನಗಳನ್ನು ತಡೆದು ತಪಾಸಣೆ ನಡೆಸಲಾಗುತ್ತಿದೆ.

ಮಹಾಮಳೆಯಿಂದ ಹಾನಿಗೀಡಾಗಿರುವ ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ ಹಾಗೂ ಇಂದಿರಾ ನಗರ ಬಡಾವಣೆಗಳು ನಿರ್ಜನವಾಗಿರುವುದರಿಂದ ಚೋರರು ಮನೆಗಳಿಗೆ ನುಗ್ಗಲು ಆರಂಭಿಸಿದ್ದಾರೆ. ಕೆಲವು ಮನೆಗಳ ಟಿವಿ ಹಾಗೂ ಅಡುಗೆ ಅನಿಲದ ಸಿಲಿಂಡರ್ ಗಳು ಕಳ್ಳತನವಾಗಿವೆ ಎನ್ನಲಾಗಿದೆ.

ಮುರಿದ ತೂಗುಸೇತುವೆ
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ 20 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ, ಕೂಡಿಗೆ ಸಮೀಪದ ಶ್ರೀ ರಾಮಲಿಂಗೇಶ್ವರ ದೇವಾಲಯದ ಬಳಿ  ಕಾವೇರಿ ನದಿಗೆ ಅಡ್ಡಲಾಗಿ 6 ವರ್ಷಗಳ ಹಿಂದೆ ನಿರ್ಮಿಸಿದ್ದ ತೂಗು ಸೇತುವೆ ನೀರು ಪಾಲಾಗಿದೆ. ಹಾರಂಗಿ-ಕಾವೇರಿ ನದಿಯ ಸಂಗಮದಲ್ಲಿ ನೀರು ಹರಿಯುವ ರಭಸ ಹೆಚ್ಚಾಗಿ ಸೇತುವೆಯ ಮೇಲ್ಭಾಗದಲ್ಲೂ ಹರಿದ ಪರಿಣಾಮ ಎರಡೂ ತುದಿಗಳ ಮೆಟ್ಟಿಲುಗಳು ಮತ್ತು ಅದಕ್ಕಳವಡಿಸಿದ್ದ ಬೃಹತ್ ಗಾತ್ರದ ಹಗ್ಗಗಳು ತುಂಡಾಗಿವೆ. 

ನಾಲ್ಕು ಮನೆಗಳು ನೆಲಸಮ
ಕೂಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವೇರಿ ಬಡಾವಣೆಯಲ್ಲಿನ ಎರಡು ಮನೆಗಳು ನೀರಿನಿಂದ ಜಲಾವೃತಗೊಂಡ ಪರಿಣಾಮ ನೆಲಸಮಗೊಂಡಿವೆ. ಅದೇ ರೀತಿಯಲ್ಲಿ ಸೀಗೆಹೊಸೂರು ಮತ್ತು ಸೀತಾ ಕಾಲೋನಿಯಲ್ಲಿಯೂ ಎರಡು ಮನೆಗಳು ಕುಸಿದಿವೆ.

ಸಂಪರ್ಕ ಸೇತುವೆ ಕುಸಿತ
ಮೈಸೂರು ಜಿಲ್ಲೆಯ ಕಣಗಾಲು ಹೋಬಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕಾವೇರಿ ನದಿಗೆ ಹೆಬ್ಬಾಲೆ- ಹನುಮಂತಪುರ ಗ್ರಾಮದಲ್ಲಿ ನಿರ್ಮಿಸಲಾಗಿರುವ ಸೇತುವೆಯ ಇಕ್ಕೆಲದ ಸಂಪರ್ಕದ ರಸ್ತೆ ನೀರಿನ ರಭಸಕ್ಕೆ ಕುಸಿದಿದ್ದು, ಭಾರೀ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ಪರಿಹಾರ ಕೇಂದ್ರ ಆರಂಭ
ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂ. ವ್ಯಾಪ್ತಿಯಲ್ಲಿ 4 ಪುನರ್ವಸತಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಕೂಡಿಗೆ, ಮದಲಾಪುರ, ಹುಲುಗುಂದ, ಮುಳ್ಳುಸೋಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ತೆರೆದಿರುವ ಕೇಂದ್ರಗಳಲ್ಲಿ ನೂರಾರು ನಿರಾಶ್ರಿತರು ಆಶ್ರಯ ಪಡೆದಿದ್ದಾರೆ. ಇವರಿಗೆ ಸ್ಥಳೀಯ ಆಡಳಿತ ಮತ್ತು ವಿವಿಧ ಸೇವಾ ಸಂಸ್ಥೆಗಳು ನೆರವು ನೀಡುತ್ತಿವೆ.

ನದಿ ನೀರಿನಿಂದ ಜಲಾವೃತಗೊಂಡಿದ್ದ ಸ್ಥಳಗಳಲ್ಲಿ ಇದೀಗ ನೀರು ಕಡಿಮೆಯಾಗುತ್ತಿದ್ದು, ಜಲಾವೃತಗೊಂಡಿದ್ದ ಮನೆಗಳ ನೀರು ಇಂಗಿದ ಹಿನ್ನೆಲೆಯಲ್ಲಿ ಮನೆಯ ಮಾಲಕರು ತಮ್ಮ ಮನೆಗಳ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಸ್ವಚ್ಛತೆಗೆ ಜಿಲ್ಲಾಡಳಿತದ ಆದೇಶದಂತೆ ಬ್ಲೀಚಿಂಗ್ ಪುಡಿ ಮತ್ತು ಫಿನಾಯಿಲ್‍ಗಳನ್ನು ವಿತರಿಸಲಾಗುತ್ತಿದೆ. 

ಗೊಬ್ಬರ ನೀರುಪಾಲು: ಹಾರಂಗಿ ಅಣೆಕಟ್ಟೆಯಿಂದ ಹೆಚ್ಚು ನೀರು ಹರಿಸಿದ ಪರಿಣಾಮ ನದಿ ದಡದಲ್ಲಿರುವ ಕೂಡುಮಂಗಳೂರು ಸಹಕಾರ ಸಂಘದ ಗೋದಾಮಿಗೆ ಭಾರೀ ನೀರು ನುಗ್ಗಿದ್ದು, ಅಲ್ಲಿ ದಾಸ್ತಾನಿರಿಸಿದ್ದ 12 ಲಾರಿ ಗೊಬ್ಬರದಲ್ಲಿ 5 ಲಾರಿ ಗೊಬ್ಬರ ನೀರು ಪಾಲಾಗಿದೆ.

ನದಿಯ ನೀರು ಗೋದಾಮಿಗೆ ನುಗ್ಗುವಷ್ಟರಲ್ಲಿ ಸಾರ್ವಜನಿಕರು ಮತ್ತು ಅಗ್ನಿಶಾಮಕ ದಳದ ಸಹಕಾರದಿಂದ 7 ಲಾರಿಯಷ್ಟು ಗೊಬ್ಬರವನ್ನು ಸ್ಥಳಾಂತರಿಸಿದ್ದು, ಇದರ ಜೊತೆಗೆ ಆಹಾರ ಇಲಾಖೆ ವತಿಯಿಂದ ಪಡಿತರದಾರರಿಗೆ ವಿತರಿಸಲು ಸಂಗ್ರಹಿಸಿದ್ದ 100 ಚೀಲ ಅಕ್ಕಿಯಲ್ಲಿ 20 ಚೀಲ ಅಕ್ಕಿ ನೀರಿನಲ್ಲಿ ಮುಳುಗಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News