ಸುಂಟಿಕೊಪ್ಪ: ಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ ಡಿಸಿಎಂ ಪರಮೇಶ್ವರ್

Update: 2018-08-20 13:33 GMT

ಸುಂಟಿಕೊಪ್ಪ,ಆ.20: ಜಲಪ್ರಳಯದಿಂದ ತತ್ತರಿಸಿ ಪುರ್ನವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರನ್ನು ರಾಜ್ಯ ಗೃಹ ಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪರಮೇಶ್ವರ್ ಭೇಟಿ ನೀಡಿ ಸಾಂತ್ವನ ಹೇಳಿ ಪರಿಹಾರದ ಭರವಸೆಯನ್ನು ನೀಡಿದರು.

ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪುರ್ನವಸತಿ ಕೇಂದ್ರದಲ್ಲಿ ನೆಲೆಸಿರುವ ಸಂತ್ರಸ್ಥರನ್ನು ಭೇಟಿ ನೀಡಿ ಅವರ ಮನವಿಯನ್ನು ಆಲಿಸಿ ನಂತರ ಪ್ರತಿಕ್ರಿಯಿಸಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರದ ವತಿಯಿಂದ ಸಂತ್ರಸ್ಥರಿಗೆ ತಾತ್ಕಾಲಿಕ ಪರಿಹಾರ ನೀಡಲಾಗುವುದು. ಮಳೆ ನಿಂತ ಕೆಲವೇ ದಿನಗಳಲ್ಲಿ ಸಂತ್ರಸ್ಥರಿಗೆ ಸರ್ಕಾರ ಗುರುತಿಸುವ ಜಾಗದಲ್ಲಿ ಮನೆ ಕಟ್ಟಲು ರಾಜ್ಯ ಸರ್ಕಾರ ಈಗಾಗಲೇ ನಿರ್ಧಾರಕ್ಕೆ ಬಂದಿದೆ. ಆ ನಿಟ್ಟಿನಲ್ಲಿ ಕೆಲ ದಿನಗಳವರೆಗೆ ತಾವು ತಾಳ್ಮೆಯಿಂದ ಇರಬೇಕು ಎಂದರು.

ಸರ್ಕಾರದಿಂದ ಯಾವುದೇ ವಸ್ತುಗಳು ಸಂತ್ರಸ್ತರಿಗೆ ತಲುಪಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ, ಈಗಾಗಲೇ ಸರ್ಕಾರದಿಂದ ಸಂತ್ರಸ್ತರಿಗೆ ಬೇಕಾದ ಎಲ್ಲ ವಸ್ತುಗಳನ್ನು ಕೊಡಗಿಗೆ ಕಳುಹಿಸಿಕೊಡಲಾಗಿದೆ ಎಂದರು. ಅದರೆ, ಜನರು ಸರಕಾರದ ಯಾವುದೇ ವಸ್ತುಗಳು ಇಲ್ಲಿಗೆ ತಲುಪಿಲ್ಲ ಎಂದು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದಾಗ, ಇದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಐಜಿ ಬಾಸ್ಕರ ರಾವ್, ಎಸ್.ಪಿ.ಸುಮನ್ ಪಣೆಕ್ಕಾರ್, ಗ್ರಾ.ಪಂ ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವುಮಾದಪ್ಪ, ಬ್ಲಾಕ್ ಅಧ್ಯಕ್ಷ ಕೆ.ಎಂ.ಲೋಕೇಶ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀದ್ರ, ಹಿರಿಯ ಮುಖಂಡ ಎಂ.ಎ.ವಸಂತ ಮತ್ತಿತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News