ಕೊಡಗು ಮಳೆಹಾನಿ: ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸಚಿವ ಪುಟ್ಟರಾಜು ಸೂಚನೆ

Update: 2018-08-20 16:42 GMT

ಮಡಿಕೇರಿ ಆ.20: ಮಹಾಮಳೆಯಿಂದ ಜಿಲ್ಲೆಯಲ್ಲಿ ಉಂಟಾಗಿರುವ ಅಪಾರ ಪ್ರಮಾಣದ ಹಾನಿಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸುವ ಮೂಲಕ ಸಂಕಷ್ಟಕ್ಕೆ ಒಳಗಾಗಿರುವವರಿಗೆ ತಕ್ಷಣ ಸ್ಪಂದಿಸಬೇಕೆಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ಸೂಚನೆ ನೀಡಿದ್ದಾರೆ.  

ಸಣ್ಣ ನೀರಾವರಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಅವರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಶಾಸಕರುಗಳು ಹಾಗೂ ಇತರ ಜನಪ್ರತಿನಿಗಳು ಕೊಡಗು ಜಿಲ್ಲಾಕಾರಿಗಳನ್ನು ಭೇಟಿಯಾಗಿ ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾಡಳಿತದಿಂದ ಮಾಹಿತಿ ಪಡೆದರು. 

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ಜಿಲ್ಲಾಡಳಿತದ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ಜಿಲ್ಲೆಗೆ 30 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಹಣ ಮಾತ್ರ ಖರ್ಚಾಗುತ್ತಿಲ್ಲ. ರಸ್ತೆಯನ್ನು ಆಕ್ರಮಿಸಿಕೊಂಡಿರುವ ಮಣ್ಣನ್ನು ತೆರವುಗೊಳಿಸಲು ಜೆಸಿಬಿಗಳೇ ನಮ್ಮಲ್ಲಿ ಇಲ್ಲ. ಜಿಲ್ಲಾಡಳಿತದವರು ಹಿಂದಿನ ಲೆಕ್ಕ ಚುಕ್ತಾ ಮಾಡಿಲ್ಲ ಎಂಬ ಕಾರಣಕ್ಕೆ ಕೆಲಸ ಮಾಡಲು ಜೆಸಿಬಿಗಳು ಹಿಂದೇಟು ಹಾಕುತ್ತಿದ್ದು, ಗ್ರಾಮೀಣ ರಸ್ತೆಗಳ ಸ್ಥಿತಿ ಹೇಳತೀರದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ಸಂದರ್ಭ ಸಂತ್ರಸ್ತ ಜಿ.ಪಂ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಮಾತನಾಡಿ, ನಾವು 120 ಕ್ಕೂ ಅಧಿಕ ಮಂದಿ ಪ್ರವಾಹಕ್ಕೆ ತುತ್ತಾಗಿದ್ದೆವು. ಜಿಲ್ಲಾಡಳಿತದ ರಕ್ಷಣೆಗಾಗಿ ಕಾದೆವು. ಆದರೆ ಯಾರು ಕೂಡ ನಮಗೆ ಸ್ಪಂದನೆ ನೀಡಿಲ್ಲ. ಅಕಾರಿಗಳು ಗ್ರಾಮೀಣ ಪ್ರದೇಶದತ್ತ ಆಗಮಿಸುತ್ತಲೇ ಇಲ್ಲ ಎಂದು ಅಸಮಾಧಾನವ್ಯಕ್ತ ಪಡಿಸಿದರು. ಈ ಸಂದರ್ಭ ಸಚಿವ ಸಿ.ಎಸ್.ಪುಟ್ಟರಾಜು ಕೊಡಗಿನ ಜನರ ಕಷ್ಟಗಳಿಗೆ ಸ್ಪಂದಿಸಬೇಕಾಗಿದೆ. ಆದ್ದರಿಂದ ಅಲ್ಲಿನ ಬೇಕು-ಬೇಡಗಳನ್ನು ತಿಳಿಯಬೇಕಾಗಿದೆ. ಈ ವಿಷಯವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾಡಳಿತ ಕೂಡ ಕಾರ್ಯೋನ್ಮುಖವಾಗಬೇಕು ಎಂದು  ಹೇಳಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನಲ್ಲಿ ನಡೆದ ಘಟನೆ ಎಲ್ಲರಿಗೂ ನೋವು ತರುವಂತಹ ವಿಚಾರ. ಕೊಡಗು ಹಾಗೂ ಮಂಡ್ಯ ಜಿಲ್ಲೆಗೆ ಅವಿನಾಭವ ಸಂಬಂಧವಿದೆ. ಜಿಲ್ಲೆಗೆ ನಾವು ಎಲ್ಲ ರೀತಿಯಲ್ಲೂ ಸಹಕಾರ ನೀಡಲಿದ್ದೇವೆ. ಸಮನ್ವಯತೆಯ ಕೊರತೆಯಿಂದ ಕೆಲವು ತೊಂದರೆಗಳಾಗಿದ್ದು, ಯಾವುದೇ ರೀತಿಯಲ್ಲಿ ಪರಿಹಾರ ಕಾರ್ಯಗಳಿಗೆ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.

ರಸ್ತೆಗಳಿಗೆ ಬೇಕಾದ ಹಣವನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದ್ದು, ಕಾಮಗಾರಿಯನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ಶಾಶ್ವತ ತಡೆಗೋಡೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿ ನಡೆಸಲಾಗುವುದು. ಮಂಡ್ಯ ಜಿಲ್ಲೆಯಿಂದ 2,200 ಕ್ವಿಂಟಾಲ್‍ಗೂ ಹೆಚ್ಚು ಅಕ್ಕಿಯನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ನಿಮಿಷಾಂಭಾ ದೇವಸ್ಥಾನದಿಂದ ಸೀರೆ, ಜಿಲ್ಲಾಡಳಿತದಿಂದ ಖಾತೆ ತೆರೆದು ಹಣ ಸಂಗ್ರಹಿಸಲು ವ್ಯವಸ್ಥೆ ಮಾಡಲಾಗಿದೆ. ಮಂಡ್ಯ ಹಾಲು ಉತ್ಪಾದಕರ ಸಂಘದಿಂದ ಹಾಲು ಪುಡಿ ನೀಡುವುದು ಸೇರಿದಂತೆ ವಿವಿಧ ರೀತಿಯಲ್ಲಿ ಜಿಲ್ಲೆಗೆ ಸಹಕಾರ ನೀಡಲಿದೆ ಎಂದು  ಹೇಳಿದರು. 

ಮುಂದೆ ಇ ಟಾಯ್ಲೆಟ್, ಗ್ಯಾಸ್ ಲೈಟ್, ಗ್ಯಾಸ್ ಗೀಸರ್ ತರಿಸುವ ವ್ಯವಸ್ಥೆ ಮಾಡಲಾಗುವುದು. ಮಂಡ್ಯ ಜಿಲ್ಲಾಡಳಿತ ಕೂಡ ಕೊಡಗು ಆಡಳಿತಕ್ಕೆ ಸಹಕಾರ ನೀಡಲಿದೆ. ಇದು ರಾಜಕೀಯ ಮಾಡುವ ಸಂದರ್ಭ ಅಲ್ಲವೆಂದು ಪುಟ್ಟರಾಜು, ಪ್ರತಿಯೊಬ್ಬರು ಸಮನ್ವಯತೆಯಿಂದ ಕೆಲಸ ಮಾಡಬೇಕಾಗಿದೆ ಎಂದರು.

ನೆಲಮಂಗಲ ಶಾಸಕ ಸುರೇಶ್, ಮಳ್ಳವಳ್ಳಿ ಶಾಸಕ ಅಂದಾನಿ, ಎಂಎಲ್‍ಸಿ ಶ್ರೀ ಕಂಠೇಗೌಡ, ಮಂಡ್ಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಸ್ವಾಮಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News