ಶಿವಮೊಗ್ಗದಲ್ಲಿ ತಗ್ಗಿದ ಮಳೆಯ ಅಬ್ಬರ: ಸಹಜ ಸ್ಥಿತಿಗೆ ನೆರೆ ಪೀಡಿತ ಪ್ರದೇಶಗಳು

Update: 2018-08-20 17:11 GMT

ಶಿವಮೊಗ್ಗ, ಆ. 20: ಪಶ್ಚಿಮಘಟ್ಟ ಸೇರಿದಂತೆ ಜಿಲ್ಲೆಯಾದ್ಯಂತ ಮುಂಗಾರು ಮಳೆಯ ಅಬ್ಬರ ಕಡಿಮೆಯಾಗುತ್ತಿದೆ. ಇದರಿಂದ ಉಕ್ಕಿ ಹರಿಯುತ್ತಿದ್ದ ನದಿಗಳು ಶಾಂತವಾಗುತ್ತಿವೆ. ನೆರೆ ಪೀಡಿತ ಪ್ರದೇಶಗಳಲ್ಲಿ ಅಸ್ತವ್ಯಸ್ತಗೊಂಡಿದ್ದ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. 

ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಕಡಿಮೆಯಾಗಿರುವುದರಿಂದ, ಪ್ರಮುಖ ಡ್ಯಾಂಗಳ ಒಳಹರಿವು ಕುಗ್ಗಿದೆ. ಇದರಿಂದ ಡ್ಯಾಂಗಳ ಹೊರಹರಿವಿನಲ್ಲಿಯೂ ಇಳಿಕೆಯಾಗುತ್ತಿದೆ. ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ ಒಟ್ಟಾರೆ 11.71 ಮಿ.ಮೀ. ಮಳೆಯಾಗಿದೆ. 

ಡ್ಯಾಂ ವಿವರ: ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟವನ್ನು 1817.25 (ಗಡಿಷ್ಠ ಮಟ್ಟ : 1819) ಅಡಿಗೆ ಕಾಯ್ದುಕೊಳ್ಳಲಾಗಿದೆ. 30,094 ಕ್ಯೂಸೆಕ್ ಒಳಹರಿವಿದ್ದು, 35,034 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 

ಭದ್ರಾ ಹಾಗೂ ತುಂಗಾ ಡ್ಯಾಂಗಳು ಈಗಾಗಲೇ ಗರಿಷ್ಠ ಮಟ್ಟ ತಲುಪಿವೆ. ಭದ್ರಾ ಡ್ಯಾಂನ ಒಳಹರಿವು 33,932 ಕ್ಯೂಸೆಕ್ ಇದ್ದು, 36,317 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ತುಂಗಾ ಡ್ಯಾಂನ ಒಳಹರಿವು 37,124 ಕ್ಯೂಸೆಕ್ ಇದ್ದು, 35,3030 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News