ದಾವಣಗೆರೆ: ನೂರಾರು ಅಡಿಕೆ ಮರಗಳನ್ನು ಕಡಿದ ದುಷ್ಕರ್ಮಿಗಳು

Update: 2018-08-20 17:20 GMT

ದಾವಣಗೆರೆ,ಆ.20: ಸಹೋದರ ಕಲಹದಿಂದ ಫಲ ಕೊಡುತ್ತಿದ್ದ ನೂರಾರು ಅಡಿಕೆ ಮರಗಳನ್ನು ಕಡಿದು ನಾಶ ಮಾಡಿರುವ ಘಟನೆ ಚನ್ನಗಿರಿ ತಾ. ನವಿಲೇಹಾಳ್ ಗ್ರಾಮದಲ್ಲಿ ನಡೆದಿದೆ. 

ಚನ್ನಗಿರಿ ತಾ. ನವಿಲೇಹಾಳ್ ಗ್ರಾಮದ ಚಿಕ್ಕರಾಜು ಎಂಬುವರಿಗೆ ಸೇರಿದ ಸುಮಾರು 15 ವರ್ಷದಷ್ಟು ಹಳೆಯದಾದ ಸಮೃದ್ಧ ಫಲ ನೀಡುತ್ತಿದ್ದ ಅಡಿಕೆ ಮರಗಳನ್ನು ಯಾರೋ ದುಷ್ಕರ್ಮಿಗಳು ರಾತ್ರೋರಾತ್ರಿ ಕಡಿದು ನಾಶ ಮಾಡಿದ್ದಾರೆ. ಚಿಕ್ಕರಾಜು ಕಷ್ಟಪಟ್ಟು ಸಾಕಿದ್ದ ನೂರಾರು ಅಡಿಕೆ ಮರಗಳನ್ನು ಸಂಬಂಧಿಕರೇ ಕಡಿದು ಹಾಕಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಆಸ್ತಿ ವಿಚಾರವಾಗಿ ಪದೇಪದೇ ಚಿಕ್ಕರಾಜು ಹಾಗೂ ಸಂಬಂಧಿಗಳ ಕುಟುಂಬದ ಮಧ್ಯೆ ಜಗಳ, ಗಲಾಟೆ ನಡೆಯುತ್ತಿದ್ದವು. ಈ ಗಲಾಟೆ, ವೈಷಮ್ಯದಿಂದಾಗಿಯೇ ಅಡಿಕೆ ಮರಗಳನ್ನು ನಾಶ ಮಾಡಲಾಗಿದೆ ಎಂದು ಹೇಳಲಾಗಿದೆ.

ಕೈತುಂಬಾ ಫಲ ನೀಡುತ್ತಿದ್ದ ಅಡಿಕೆ ಮರಗಳನ್ನು ಕಡಿದಿದ್ದರಿಂದ ಜೀವನಕ್ಕೆ ಆಸರೆಯಾಗಿದ್ದ ಆದಾಯ ಮೂಲ ನಾಶವಾಗಿದ್ದು, ಚಿಕ್ಕರಾಜು ಕುಟುಂಬ ನೋವು, ಸಂಕಟದಿಂದ ಕಣ್ಣೀರು ಹಾಕುತ್ತಿದೆ. ಅಡಿಕೆ ಮರ ಕಡಿದವರನ್ನು ತಕ್ಷಣವೇ ಬಂಧಿಸಿ, ಕಠಿಣ ಶಿಕ್ಷೆ ವಿಧಿಸುವಂತೆ ಸಂತ್ರಸ್ಥ ಕುಟುಂಬ ಜಿಲ್ಲಾ ಪೊಲೀಸ್ ವರಿಷ್ಟರಿಗೆ ಒತ್ತಾಯಿಸಿದೆ. 

ಆಸ್ತಿ ವಿಚಾರವಾಗಿ ಚಿಕ್ಕರಾಜು ಹಾಗೂ ಸಂಬಂಧಿಗಳ ಮಧ್ಯೆ ಜಗಳದ ಹಿನ್ನೆಲೆಯಲ್ಲಿ ನೂರಾರು ಅಡಿಕೆ ಮರಗಳನ್ನು ಕಡಿಯಲಾಗಿದೆ. ಘಟನೆ ನಂತರ ಚಿಕ್ಕರಾಜು ಕುಟುಂಬವು ಗ್ರಾಮಕ್ಕೆ ಬರದಂತೆ ಸಂಬಂಧಿಗಳೇ ಬೆದರಿಕೆ ಹಾಕಿದ್ದಾರೆ. ಅಡಿಕೆ ಗಿಡಗಳನ್ನು ಕಳೆದುಕೊಂಡ  ಚಿಕ್ಕರಾಜು ಕುಟುಂಬ ತಮ್ಮ ಮತ್ತೊಬ್ಬ ಸಂಬಂಧಿಗಳ ಮನೆಯಲ್ಲಿ ಆಶ್ರಯ ಪಡೆದಿದೆ ಎಂದು ತಿಳಿದು ಬಂದಿದೆ. ಸುಮಾರು 15 ವರ್ಷಗಳಷ್ಟು ಹಳೆಯ ಅಡಿಕೆ ಮರಗಳನ್ನು ಕಡಿದು ಹಾಕಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News