ಕೇರಳ ನೆರೆ ಸಂತ್ರಸ್ತರೆಲ್ಲಾ ಶ್ರೀಮಂತರು ಎಂದು ಸುಳ್ಳು ಹರಡಿದ ವ್ಯಕ್ತಿ ಬಿಜೆಪಿ ಐಟಿ ಸೆಲ್ ಸದಸ್ಯ

Update: 2018-08-21 07:13 GMT

ಹೈದರಾಬಾದ್, ಆ. 21: ಕೇರಳದಲ್ಲಿ ಭಾರೀ ಮಳೆ ಹಾಗೂ ಪ್ರವಾಹದಿಂದ ಸಂತ್ರಸ್ತರಾದವರ ಪೈಕಿ ಹೆಚ್ಚಿನವರು ಮಧ್ಯಮ ವರ್ಗದವರು, ಮಧ್ಯಮ ಮೇಲ್ವರ್ಗದವರು ಹಾಗೂ ಶ್ರೀಮಂತರು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡ ಹೈದರಾಬಾದಿ ವ್ಯಕ್ತಿ ಬಿಜೆಪಿಯ ಐಟಿ ಘಟಕದ ಸದಸ್ಯ ಎಂದು ತಿಳಿದು ಬಂದಿದೆ.

ಸುರೇಶ್ ಕೊಚತ್ತಿಲ್ ಎಂಬ ಹೆಸರಿನ ಈ ವ್ಯಕ್ತಿ ಎರಡು ನಿಮಿಷದ ಧ್ವನಿಮುದ್ರಿಕೆ ಸಂದೇಶದಲ್ಲಿ ತಾನು ನೆರೆಯಿಂದಾಗಿ ಕೇರಳದ ಕೊಚ್ಚಿಯಲ್ಲಿ ಬಾಕಿಯುಳಿದಿದ್ದಾಗಿ ಹಾಗೂ ತಾನು ಈ ಸಂದರ್ಭ ನಗರದಿಂದ ಕೇವಲ ಒಂದು ಗಂಟೆ ದೂರದ ಪ್ರಯಾಣ ಹಾದಿಯಿದ್ದ ಗ್ರಾಮವನ್ನು ತಲುಪಲು ಯತ್ನಿಸಿದ್ದಾಗಿ ಹೇಳಿಕೊಂಡಿದ್ದಾನೆ.

ಪ್ರವಾಹದಿಂದ ಹೆಚ್ಚಾಗಿ ಮಧ್ಯಮ ವರ್ಗದವರು ಮತ್ತು ಶ್ರೀಮಂತರೇ ಕಷ್ಟ ಅನುಭವಿಸಿದ್ದು ಅವರಿಗೆ ಹಣ ಯಾ ಅಗತ್ಯ ವಸ್ತುಗಳು ಬೇಕಿಲ್ಲ, ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕಗಳೂ ಸರಿಯಾಗಿವೆ ಎಂದು ಆತ ಹೇಳಿಕೊಂಡಿದ್ದಾನೆ. ಪ್ರವಾಹದಿಂದ ಬಾಧಿತರಾದವರಿಗೆ ತಮ್ಮ ಮನೆಗಳನ್ನು ದುರಸ್ತಿಪಡಿಸಲು ಮೇಸ್ತ್ರಿಗಳು ಮತ್ತು ಇಲೆಕ್ಟ್ರಿಶಿಯನ್ ಇವರುಗಳ ಅಗತ್ಯವಿದೆ, ಹಣ ಕಳುಹಿಸುವ ಬದಲು ಇಂತಹ ಸೇವೆಗಳನ್ನು ಜನರು ಒದಗಿಸಬೇಕು ಎಂದೂ ಆತ ಹೇಳಿಕೊಂಡಿದ್ದಾನೆ.

ಸುರೇಶ್ ಕೊಚತ್ತಿಲ್ ಎಂಬ ಹೆಸರಿನ ಈ ವ್ಯಕ್ತಿಯ ಫೇಸ್ ಬುಕ್ ಪ್ರೊಫೈಲ್ ಪರಿಶೀಲಿಸಿದಾಗ ಈತ ಬಿಜೆಪಿ ಐಟಿ ಘಟಕದ ಸದಸ್ಯನೆಂದು ತಿಳಿದು ಬಂದಿದೆಯಲ್ಲದೆ ಮೂಲತಃ ಕೇರಳದವನಾದ ಈತ ಈಗ ಹೈದರಾಬಾದ್ ನಗರದಲ್ಲಿ ನೆಲೆಸಿದ್ದಾನೆ.

ಆತನ ಅಸಂವೇದಿತನದ ಹೇಳಿಕೆಗೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ಕಿಡಿ ಕಾರಿದ್ದಾರೆ. ಇದಕ್ಕೆ ಪ್ರತಿಯಾಗಿ ತನಗೆ ಕೇರಳದ ಸಿಪಿಐಎಂ ಮಂದಿ ಬೆದರಿಸುತ್ತಿದ್ದಾರೆ ಎಂದು ಆತ ಇನ್ನೊಂದು ಫೇಸ್ ಬುಕ್ ಪೋಸ್ಟ್ ಮಾಡಿದ್ದಾನೆ. ಹಲವಾರು ಸೆಲೆಬ್ರಿಟಿಗಳು ಹಾಗೂ ಇತರ ಗಣ್ಯರು ಆತನನ್ನು ಟೀಕಿಸಿದ್ದು, ಜನಪ್ರಿಯ ನಟ ದುಲ್ಖರ್ ಸಲ್ಮಾನ್ ಕೂಡ ಆತನನ್ನು ಟೀಕಿಸಿ ಇನ್‌ಸ್ಟಾಗ್ರಾಂ ಪೋಸ್ಟ್ ನಲ್ಲಿ ಆತನ ಮಾತನ್ನು ನಂಬದೆ ಕೇರಳದ ಪ್ರವಾಹ ಪೀಡಿತರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ಜನರು ಕೇರಳದ ಪ್ರವಾಹ ಪೀಡಿತರಿಗೆ ಸಹಾಯ ಮಾಡುವುದನ್ನು ತಡೆಯಲು ಆತ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾನೆ ಎಂದು ಕಾಂಗ್ರೆಸ್ ಕೂಡ ಟ್ವೀಟ್ ಮಾಡಿದೆ. ಈ ಸುರೇಶ್ ಕೊಚತ್ತಿಲ್ ಎಂಬ ವ್ಯಕ್ತಿ ಹೈದರಾಬಾದ್ ನ ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ಸಂಪಾದಕೀಯ ಹುದ್ದೆಯಲ್ಲಿದ್ದು, ಆತ ಗ್ರೇಟರ್ ಹೈದರಾಬಾದ್ ಅಡ್ವೆಂಚರ್ ಕ್ಲಬ್ ನಲ್ಲೂ ಸಕ್ರಿಯನಾಗಿದ್ದಾನೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News