ಚಿಕ್ಕಮಗಳೂರು: ಬಿಡುವು ನೀಡಿದ ಮಳೆ; ಅಲ್ಲಲ್ಲಿ ಭೂ ಕುಸಿತ

Update: 2018-08-21 11:53 GMT

ಚಿಕ್ಕಮಗಳೂರು, ಆ.21: ಕಳೆದ ಕೆಲವು ದಿನಳಿಂದ ಮಲೆನಾಡಿನಲ್ಲಿ ಸಾಕಷ್ಟು ಅವಾಂತರಗಳನ್ನೇ ಸೃಷ್ಟಿಸಿದ್ದ ಮಳೆರಾಯ ಸದ್ಯ ಬಿಡುವು ನೀಡಿದ್ದು, ಭಾರೀ ಮಳೆಯಿಂದ ಕಂಗೆಟ್ಟಿದ್ದ ಜನತೆ ಹಾಗೂ ರೈತರು ನಿರಾಳರಾಗಿದ್ದಾರೆ. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದ ಹೇಮಾವತಿ, ತುಂಗಾ, ಭದ್ರಾ ನದಿಗಳು ಶಾಂತಗೊಂಡಿವೆ. ಮಳೆ ನಿಂತರೂ ಕೆಲವೆಡೆ ಭೂ ಕುಸಿತದಿಂದಾಗಿ ಕಾಫಿ, ಅಡಿಕೆ ತೋಟಗಳಲ್ಲಿ ಅಪಾರ ಹಾನಿಯಾದ ಬಗ್ಗೆ ಮಂಗಳವಾರ ವರದಿಯಾಗಿದೆ.

ಕಳೆದ ರವಿವಾರದಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣಾರ್ಭಟ ಕ್ಷೀಣಿಸಿದ್ದು, ಸೋಮವಾರ ಜಿಲ್ಲೆಯ ಶೃಂಗೇರಿ, ಕೊಪ್ಪ, ಮೂಡಿಗೆರೆ, ಕಳಸ, ಕುದುರೆಮುಖ ಭಾಗಗಳಲ್ಲಿ ಆಗಾಗ್ಗೆ ಸಾಧಾರಣ ಮಳೆಯಾಗಿತ್ತು. ಸೋಮವಾರ ಸಂಜೆ ಹಾಗೂ ರಾತ್ರಿ ಆಗಾಗ್ಗೆ ಧಾರಾಕಾರ ಮಳೆಯಾಗಿತ್ತು. ಆದರೆ ಮಂಗಳವಾರ ಮಲೆನಾಡಿನ ಅಲ್ಲಲ್ಲಿ ಒಂದೆರೆಡು ಬಾರಿ ಸಾಧಾರಣ ಮಳೆಯಾಗಿದ್ದು ಹೊರತು ಪಡಿಸಿ ಭಾರೀ ಮಳೆಯಾದ ಬಗ್ಗೆ ವರದಿಯಾಗಿಲ್ಲ.

ಮೂಡಿಗೆರೆ ತಾಲೂಕು ವ್ಯಾಪಿಯ ಊರುಬಗೆ ಗ್ರಾಮದಲ್ಲಿ ಸುಶೀಲಮ್ಮ ಎಂಬುವವರ ಮನೆ ಶೇ. 30ರಷ್ಟು ಹಾನಿಯಾಗಿದೆ. ಎಸ್.ವಿ. ರಮೇಶ್ ಎಂಬವರ ಮನೆ ಶೇ.40 ರಷ್ಟು ಹಾನಿಯಾಗಿದೆ. ಅರೆನೂರು ಗ್ರಾಮದ ದಿನೇಶ್ ಎಂಬುವರ ಮನೆ ಶೇ.30 ರಷ್ಟು ಹಾನಿಯಾಗಿದೆ. ಹೊರನಾಡು ಗ್ರಾಮದ ನೇಮಿರಾಜಯ್ಯ ಎಂಬುವವರ ಮನೆ ಮೇಲೆ ಮರ ಬಿದ್ದು ಶೇ.35 ರಷ್ಟು ಹಾನಿಯಾಗಿದೆ. ಮಳೆ ಕಡಿಮೆಯಾಗಿರುವುದರಿಂದ ಹೇಮಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ತುಂತುರು ಮಳೆ ಮುಂದುವರಿದಿದ್ದು, ದಟ್ಟ ಮಂಜು ಕವಿದಿರುವುದರಿಂದ ವಾಹನ ಸಂಚಾರ ಮಂದಗತಿಯಲ್ಲಿ ಸಾಗುತ್ತಿದೆ. ಇನ್ನು ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಭತ್ತದ ಕೃಷಿ ಕೆಲಸ ಭರದಿಂದ ಸಾಗಿದೆ.

ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಗ್ಗೆ ಸುರಿದ ಮಳೆಯಿಂದಾಗಿ ತಾಲೂಕಿನ ಸುಗುಣವಾನಿ ಗ್ರಾಮದ ಜಗದೀಶ್ ಎಂಬವರ ಮನೆ ಸಮೀಪದ ಕಾಫಿ ತೋಟದಲ್ಲಿ ಭೂ ಕುಸಿತ ಉಂಟಾಗಿ ಅಪಾರ ಹಾನಿಯಾದ ಬಗ್ಗೆ ವರದಿಯಾಗಿದ್ದು, ಅದೇ ಗ್ರಾಮದ ಚನ್ನಪ್ಪಗೌಡ ಎಂಬವರ ಅಡಿಕೆ ತೋಟದಲ್ಲಿ ಭೂ ಕುಸಿತ ಉಂಟಾಗಿ ಅಪಾರ ಹಾನಿಯಾಗಿದೆ.

ಕೊಪ್ಪ ತಾಲೂಕು ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ತಾಲೂಕಿನ ಅತ್ತಿಕುಡಿಗೆ ಗ್ರಾಮದ ಸುಮಿತ್ರಾ ಎಂಬವರ ಮನೆ ಬಿದ್ದು ಶೇ.45ರಷ್ಟು ಹಾನಿಯಾಗಿದೆ. ತಾಲೂಕಿನ ಭೂತನಕಾಡು ಸಮೀಪ ಮೈಸೂರು ಪ್ಲಾಂಟೇಷನ್‍ನಲ್ಲಿ ಅರ್ಧ ಎಕರೆ ಪ್ರದೇಶದಲ್ಲಿ 30 ಅಡಿ ಆಳಕ್ಕೆ ಭೂಮಿ ಕುಸಿದಿದೆ. ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿರುವುದರಿಂದ ಜನರಲ್ಲಿ ಆತಂಕ ಮೂಡಿಸಿದೆ. ಈ ಪ್ರದೇಶದಲ್ಲಿ ಜನರು ಸಂಚರಿಸದಂತೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ ಸಾಧಾರಣ ಮಳೆಯಾಗಿದ್ದು, ಹಗಲಿನ ವೇಳೆ ಮಳೆ ವಿರಾಮ  ನೀಡಿತ್ತು. ತಾಲೂಕು ವ್ಯಾಪ್ತಿಯಲ್ಲಿ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ಮಂಗಳವಾರ ವರದಿಯಾಗಿಲ್ಲ.

ಮಳೆ ವಿವರ: 
ಚಿಕ್ಕಮಗಳೂರು 5 ಮೀ.ಮೀ. ವಸ್ತಾರೆ 13, ಜೋಳದಾಳ್ 12.4, ಆಲ್ದೂರು 14.8, ಕೆ.ಆರ್.ಪೇಟೆ 2.6, ಅತ್ತಿಗುಂಡಿ 20, ಸಂಗಮೇಶ್ವರಪೇಟೆ 10, ಬ್ಯಾರವಳ್ಳಿ 15.2, ಕಳಸಾಪುರ 1, ಮಳಲೂರು 4.2, ದಾಸರಹಳ್ಳಿಯಲ್ಲಿ 2 ಮಿ.ಮೀ. ಮಳೆಯಾಗಿದೆ. 

ಕಡೂರು ತಾಲೂಕಿನ ಕಡೂರು 1, ಸಖರಾಯಪಟ್ಟಣ 1.4, ಬೀರೂರು 3.9, ಎಮ್ಮೆದೊಡ್ಡಿ 2.2 ಮಿ.ಮೀ ಮಳೆಯಾಗಿದೆ. ಕೊಪ್ಪ ತಾಲೂಕಿನ ಕೊಪ್ಪ 48.4, ಹರಿಹರಪುರ 40, ಜಯಪುರ 26.2, ಕಮ್ಮರಡಿ 32.2, ಬಸರಿಕಟ್ಟೆ 44.2 ಮಿ.ಮೀ ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಮೂಡಿಗೆರೆ 8.2, ಕೊಟ್ಟಿಗೆಹಾರ 29.8, ಜಾವಳಿ 14, ಗೋಣಿಬೀಡು 10, ಕಳಸ 33.6 ಮಿ.ಮೀ. ಮಳೆಯಾಗಿದೆ. 

ಎನ್.ಆರ್.ಪುರ ತಾಲೂಕಿನ ಎನ್.ಆರ್.ಪುರ 21.2, ಬಾಳೆಹೊನ್ನೂರು 14.4, ಮೇಗರಮಕ್ಕಿಯಲ್ಲಿ 13 ಮಿ.ಮೀ ಮಳೆಯಾಗಿದೆ. ಶೃಂಗೇರಿ ತಾಲೂಕಿನ ಶೃಂಗೇರಿ 34.4, ಕಿಗ್ಗಾ 78, ಕೆರೆಕಟ್ಟೆ 130 ಮಿ.ಮೀ. ಮಳೆಯಾಗಿದೆ. ತರೀಕೆರೆ ತಾಲೂಕಿನ ತರೀಕೆರೆ 5.2, ಲಕ್ಕವಳ್ಳಿ 15.4, ಅಜ್ಜಂಪುರ 5.6, ಶಿವನಿ 4.1, ಬುಕ್ಕಾಂಬುದಿ 3.1, ಲಿಂಗದಹಳ್ಳಿ 6.4, ತಣಿಗೆಬೈಲ್ 14, ಉಡೆವಾ 7.1, ತ್ಯಾಗದಬಾಗಿ 9.4, ಹುಣಸೆಗಟ್ಟ 5, ರಂಗೇನಹಳ್ಳಿಯಲ್ಲಿ 5 ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News