ರಾಜ್ಯದ 30 ಕ್ಕೂ ಅಧಿಕ ಇಂಜಿನಿಯರ್ ಕಾಲೇಜುಗಳಲ್ಲಿ ಶೂನ್ಯ ದಾಖಲಾತಿ !

Update: 2018-08-21 14:06 GMT

ಬೆಂಗಳೂರು, ಆ.21: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ 30 ಕ್ಕೂ ಅಧಿಕ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾಮೆಡ್ ಕೆ ಅಡಿಯಲ್ಲಿ ಪದವಿ ಕೋರ್ಸ್‌ಗಳಿಗೆ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ.

2018-19ನೇ ಶೈಕ್ಷಣಿಕ ಸಾಲಿನಲ್ಲಿ ಸರಕಾರ ಮತ್ತು ಕಾಮೆಡ್ ಕೆ ಅಡಿ ಇಂಜಿನಿಯರಿಂಗ್ ಪದವಿ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಇತ್ತೀಚೆಗಷ್ಟೇ ಮುಗಿದಿದೆ. ಕಾಮೆಡ್ ಕೆ ಯಿಂದ ಸಿಕ್ಕಿರುವ ಅಂಕಿಅಂಶಗಳ ಪ್ರಕಾರ, ಕಾಮೆಡ್ ಕೆ ಕೋಟಾದಡಿ ಇರುವ ಸೀಟುಗಳಲ್ಲಿ ಶೇಕಡಾ 62ರಷ್ಟು ಸೀಟುಗಳು ಭರ್ತಿಯಾಗಿಲ್ಲ. ಈ ವರ್ಷ ಕಾಮೆಡ್ ಕೆ ಅಡಿ 16,236 ಸೀಟುಗಳು ಲಭ್ಯವಾಗಿದ್ದು ಅವುಗಳಲ್ಲಿ 10,175 ಸೀಟುಗಳು ಇನ್ನೂ ಖಾಲಿ ಉಳಿದಿವೆ ಎನ್ನಲಾಗಿದೆ.

ರಾಜ್ಯದ 33 ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ. ಇನ್ನು 33 ಕಾಲೇಜುಗಳಲ್ಲಿ 10ಕ್ಕಿಂತ ಕಡಿಮೆ ಪ್ರವೇಶಾತಿಯಾಗಿದೆ. ರಾಜ್ಯದಲ್ಲಿ ಕೇವಲ 6 ಕಾಲೇಜುಗಳಲ್ಲಿ ಶೇಕಡಾ 100ರಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು ಇನ್ನು 10 ಕಾಲೇಜುಗಳಲ್ಲಿ ಶೇಕಡಾ 80ರಿಂದ 99ರಷ್ಟು ಸೀಟುಗಳು ಭರ್ತಿಯಾಗಿವೆ. ಅಲ್ಲದೆ, ಕಾಮೆಡ್ ಕೆ ಮಾತ್ರವಲ್ಲದೆ ಸರಕಾರದ ಒಟ್ಟು 64 ಸಾವಿರ ಸೀಟುಗಳಲ್ಲಿ 21 ಸಾವಿರಕ್ಕೂ ಅಧಿಕ ಇಂಜಿನಿಯರಿಂಗ್ ಸೀಟುಗಳು ಭರ್ತಿಯಾಗದೆ ಖಾಲಿ ಉಳಿದಿವೆ ಎಂದು ತಿಳಿದುಬಂದಿದೆ.

ಶೇಕಡಾ 100ರಷ್ಟು ಪ್ರವೇಶಾತಿ ಪಡೆದಿರುವ 6 ಕಾಲೇಜುಗಳು 1,349 ಸೀಟುಗಳನ್ನು ಹಂಚಿಕೊಂಡಿದ್ದು ರಾಜ್ಯದಲ್ಲಿನ ಪ್ರಮುಖ ಕಾಲೇಜುಗಳಾಗಿವೆ. 6 ಕಾಲೇಜುಗಳಲ್ಲಿ 4 ಬೆಂಗಳೂರಿನಲ್ಲಿ ಮತ್ತು ಎರಡು ಮೈಸೂರುಗಳಲ್ಲಿವೆ.

ಕಾಮೆಡ್ ಕೆ ಅಧಿಕಾರಿಗಳು ಮತ್ತು ಕಾಲೇಜು ವ್ಯವಸ್ಥಾಪಕ ಮಂಡಳಿ ಹೇಳುವ ಪ್ರಕಾರ, ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಪ್ರವೇಶ ಇತ್ತೀಚೆಗೆ ಕಡಿಮೆಯಾಗುತ್ತಿರುವುದು ಹೊಸದಲ್ಲ. ಕಳೆದ ಎಂಟು ವರ್ಷಗಳಿಂದ ಇದೇ ಪರಿಸ್ಥಿತಿಯಿದೆ ಎಂದು ಕಾಮೆಡ್ ಕೆ ಕಾರ್ಯನಿರ್ವಹಣಾ ಕಾರ್ಯದರ್ಶಿ ಡಾ ಎಸ್. ಕುಮಾರ್ ಹೇಳಿದ್ದಾರೆ.

ಇತ್ತೀಚೆಗೆ ವಿದ್ಯಾರ್ಥಿಗಳು ಬುದ್ಧಿವಂತರಾಗಿದ್ದಾರೆ. ಜಾಹೀರಾತುಗಳಿಗೆ ಮತ್ತು ಇತರ ಟೊಳ್ಳು ಭರವಸೆಗಳಿಗೆ ಮಾರು ಹೋಗುವುದಿಲ್ಲ. ಇಂಜಿನಿಯರಿಂಗ್ ಕಾಲೇಜುಗಳು ಮೂಲಸೌಕರ್ಯಗಳನ್ನು ಒದಗಿಸಿ ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ ಎಂದು ಕಾಮೆಡ್ ಕೆ ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.

ಸಿವಿಲ್, ಮೆಕ್ಯಾನಿಕಲ್ ವಿಭಾಗಕ್ಕೆ ಕಡಿಮೆ ಬೇಡಿಕೆ: ಕಳೆದ ಮೂರು-ನಾಲ್ಕು ವರ್ಷಗಳಿಂದ ಕಂಪ್ಯೂಟರ್ ಸೈನ್ಸ್ ವಿಭಾಗವೂ ಮೆಕ್ಯಾನಿಕಲ್ ಮತ್ತು ಸಿವಿಲ್ ವಿಭಾಗದಂತೆ ಮೂಲೆಗುಂಪಾಗುತ್ತಿತ್ತು. ಆದರೆ, ಈ ವರ್ಷ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಂಪ್ಯೂಟರ್ ಸೈನ್ಸ್ ವಿಭಾಗ ಭರ್ತಿಯಾಗಿದೆ. ಸಿವಿಲ್ ಮತ್ತು ಮೆಕ್ಯಾನಿಕಲ್ ವಿಭಾಗಕ್ಕೆ ಬೇಡಿಕೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News