ನಿರಾಶ್ರಿತರ ಕೇಂದ್ರದಲ್ಲಿ ಬಿಸ್ಕೆಟ್ ಎಸೆದ ವಿಚಾರ: ಜನತೆಯ ಕ್ಷಮೆಯಾಚಿಸಿದ ಸಚಿವ ಎಚ್.ಡಿ.ರೇವಣ್ಣ

Update: 2018-08-21 14:10 GMT

ಬೆಂಗಳೂರು, ಆ.21: ಹಾಸನ ಜಿಲ್ಲೆಯ ರಾಮನಾಥಪುರದಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ ಬಿಸ್ಕೆಟ್ ಪ್ಯಾಕೆಟ್‌ಗಳನ್ನು ಎಸೆದ ಘಟನೆಗೆ ಸಂಬಂಧಿಸಿದಂತೆ ರಾಜ್ಯದ ಜನತೆಯಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕ್ಷಮೆ ಯಾಚಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಉದ್ದೇಶಪೂರ್ವಕವಾಗಿ ಆ ರೀತಿ ಮಾಡಿಲ್ಲ, ಅಂತಹ ಮನೋಭಾವನೆಯೂ ನನ್ನಲ್ಲಿ ಇಲ್ಲ. ಕೊಠಡಿಯಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಮಕ್ಕಳು, ಮಹಿಳೆಯರು ಬಿಸ್ಕೆಟ್‌ಗಾಗಿ ಕೈ ಚಾಚುತ್ತಿದ್ದರು. ಅಲ್ಲಿಗೆ ಹೋಗಿ ಕೊಡಲು ಸಾಧ್ಯವಾಗದೆ ಇರುವ ಕಾರಣಕ್ಕೆ ನಾನು ನಿಂತಿದ್ದ ಸ್ಥಳದಿಂದಲೇ ಅದನ್ನು ಕೊಡಬೇಕಾಯಿತು ಎಂದರು.

ಈ ಘಟನೆ ನಡೆದ ದಿನ ಎಲ್ಲ ಮಾಧ್ಯಮದವರು ಅಲ್ಲೇ ಇದ್ದರು. ಆದರೆ, ಮಾರನೇ ದಿನ ಸುದ್ಧಿ ಮಾಡಲಾಗಿದೆ. ಮಾಧ್ಯಮದವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ. ಆದರೆ, ಘಟನೆ ನಡೆದ ದಿನವೇ ಯಾಕೆ ಸುದ್ಧಿ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.

ನಿರಾಶ್ರಿತರ ಕೇಂದ್ರದಲ್ಲಿ ಇದ್ದವರು ಶ್ರೀಮಂತರಲ್ಲ, ಎಲ್ಲರೂ ಬಡವರು. ಪ್ರವಾಹಪೀಡಿತ ಪ್ರದೇಶಗಳಿಗೆ ನಾನು ಹಗಲು ರಾತ್ರಿ ಎನ್ನದೇ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಆದರೆ, ಏನು ಗ್ರಹಚಾರವೋ, ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ಅಭಿಯಾನವನ್ನೆ ಪ್ರಾರಂಭಿಸಿಬಿಟ್ಟಿದ್ದಾರೆ ಎಂದು ರೇವಣ್ಣ ಬೇಸರ ವ್ಯಕ್ತಪಡಿಸಿದರು.

ನಾನು ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವನಲ್ಲ. ಆದರೂ, ಜನರ ನೆರವಿಗೆ ನಿಂತಿದ್ದೇನೆ. ಕೇಂದ್ರದ ಸಚಿವರು ಸಂತ್ರಸ್ತರ ನೆರವಿಗೆ ಬಂದಿಲ್ಲ, ಇಂತಹ ಸಂದರ್ಭದಲ್ಲಿ ನಾನು ನೆರವಿಗೆ ನಿಂತಿದ್ದೆ. ಈಗ ಬಿಜೆಪಿಯವರು ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಾ, ರಾಜಕೀಯ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡೋಣ, ಇಂತಹ ಸಂದರ್ಭದಲ್ಲಿ ಬೇಡ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News