×
Ad

ಎಷ್ಟು ಸಾವಿರ ಕೋಟಿಯಾದರೂ ಸರಕಾರ ಕೊಡಗಿನೊಂದಿಗಿದೆ: ಸಚಿವ ಸಾ.ರಾ.ಮಹೇಶ್ ಅಭಯ

Update: 2018-08-21 21:31 IST

ಮಡಿಕೇರಿ, ಮಾ.21: ಮಹಾಮಳೆಯ ಆರ್ಭಟದಿಂದ ನೆಲೆಯನ್ನೆ ಕಳೆದುಕೊಂಡು ಸಂತ್ರಸ್ತರಾದವರ ಬದುಕಿಗೆ ಹೊಸ ರೂಪ ಕೊಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕೊಡಗಿನ ಜನತೆಯೊಂದಿಗಿದ್ದು, ಇದಕ್ಕಾಗಿ ಸಾವಿರ ಇಲ್ಲವೆ ಎರಡು ಸಾವಿರ ಕೋಟಿ ವೆಚ್ಚವಾದರೂ ಚಿಂತೆ ಇಲ್ಲವೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಯ ನೀಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ. 

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆಯ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಈಗಾಗಲೆ ಜಿಲ್ಲಾ ವ್ಯಾಪ್ತಿಯ 41 ಪುನರ್ವಸತಿ ಕೇಂದ್ರಗಳಲ್ಲಿ 4 ಸಾವಿರ ಸಂತ್ರಸ್ತರು ಆಶ್ರಯನ್ನು ಪಡೆದಿದ್ದಾರೆ ಎಂದರು. ಇವರೆಲ್ಲರಿಗೆ ಮತ್ತೆ ಉತ್ತಮ ಬದುಕನ್ನು ರೂಪಿಸಿಕೊಡುವುದರೊಂದಿಗೆ, ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿಗೆ ಅಗತ್ಯ ಪರಿಹಾರವನ್ನು ಒದಗಿಸಿ ಸಂಕಷ್ಟದಲ್ಲಿ ಸಿಲುಕಿರುವವರೆಲ್ಲರಿಗೆ ನೆರವು ನೀಡಲು ಸರ್ಕಾರ ಸದಾ ಬದ್ಧವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೇ ಸ್ವತಃ ತಮ್ಮೊಂದಿಗೆ ಮಾತನಾಡಿ ಭರವಸೆ ನೀಡಿದ್ದಾರೆ ಎಂದರು.

32 ಪಂಚಾಯತ್ ಗಳಲ್ಲಿ ಸಂಕಷ್ಟ
ಕಳೆದ ಒಂದು ವಾರದ ಮಹಾಮಳೆಯಿಂದ ಕೊಡಗು ಜಿಲ್ಲೆಯ 3 ತಾಲೂಕುಗಳ 32 ಗ್ರಾಮ ಪಂಚಾಯತ್ ಗಳು ನಲುಗಿವೆ. ಇದರಲ್ಲಿ ಮಡಿಕೇರಿ ತಾಲೂಕು 12, ಸೋಮವಾರಪೇಟೆ 12 ಮತ್ತು ವೀರಾಜಪೇಟೆ ತಾಲೂಕಿನ 8 ಪಂಚಾಯತ್ ಗಳೆಂದು ತಿಳಿಸಿದರು. ಈ ಎಲ್ಲಾ ಪ್ರದೇಶಗಳಲ್ಲಿ ಘಟಿಸಿರುವ ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಮಂದಿಗೆ ನೆರವನ್ನು ಒದಗಿಸಲು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಮತ್ತು ವಿವಿಧ ಇಲಾಖಾ ಅಧಿಕಾರಿಗಳಿಗೆ ಪೂರ್ಣ ಅಧಿಕಾರವನ್ನು ನೀಡಿ, ಅಗತ್ಯವಿರುವ ಎಲ್ಲಾ ನೆರವನ್ನು ಒದಗಿಸಲು ನಿರ್ದೇಶನ ನೀಡಲಾಗಿದೆ ಎಂದರು.

ನೆರವು ಕಾರ್ಯ ಬಿರುಸು
ಜಿಲ್ಲಾ ವ್ಯಾಪ್ತಿಯ ಎಲ್ಲಾ 104 ಪಂಚಾಯತ್ ಗಳಲ್ಲಿ ಭಾರೀ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಅಗತ್ಯ ನೆರವನ್ನು ಒದಗಿಸಲು ಆಯಾ ಪಂ.ಗಳ ಕಂದಾಯ ಅಧಿಕಾರಿಗಳು, ಪಿಡಿಒಗಳಿಗೆ ಸೂಚಿಸಿ, ಅಗತ್ಯ ಆಹಾರ ಸಾಮಗ್ರಿಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ಜಿಲ್ಲಾಧಿಕಾರಿಗಳು ಅತಿವೃಷ್ಟಿಯಿಂದ ಉಂಟಾಗಿರುವ ಸಂಕಷ್ಟಗಳಿಗೆ ಪರಿಹಾರ ಕಾರ್ಯಗಳನ್ನು ನಡೆಸಲು ವಿವಿಧ ಇಲಾಖೆಗಳಿಗೆ ಅಗತ್ಯ ಹಣಕಾಸನ್ನು ಒದಗಿಸಿರುವುದಾಗಿ ತಿಳಿಸಿದರು.

ಅಧಿಕಾರಿಗಳ ನಿಯುಕ್ತಿ
ಜಿಲ್ಲಾ ವ್ಯಾಪ್ತಿಯಲ್ಲಿ ಆರಂಭಿಸಲಾಗಿರುವ ಪುನರ್ವಸತಿ ಕೇಂದ್ರಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುವುದಕ್ಕೆ ಪೂರಕವಾಗಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಈಗಾಗಲೆ ನಿಯುಕ್ತಿಗೊಳಿಸಲಾಗಿದೆ. ಅತೀ ಹೆಚ್ಚಿನ ಸಂತ್ರಸ್ತರು ಪುನರ್ವಸತಿ ಕೇಂದ್ರಗಳಲ್ಲಿ ಇರುವ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಉದ್ಭವಿಸಿರಬಹುದಾದರು, ಅದನ್ನು ತಿಳಿದುಕೊಂಡು ಆಯಾ ಸಂದರ್ಭವೆ ಪರಿಹರಿಸುವ ಪ್ರಯತ್ನವನ್ನು ಮಾಡಲಾಗಿದೆ ಎಂದು ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಮಹಾಮಳೆಯಿಂದ ನಡೆದಿರುವ ಅನಾಹುತಗಳಲ್ಲಿ ಸಿಲುಕಿ ಯಾವುದೇ ವ್ಯಕ್ತಿ ನಾಪತ್ತೆಯಾಗಿದ್ದರೂ, ಆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಕ್ಷಣ ಮಾಹಿತಿ ಒದಗಿಸುವಂತೆ ಸಚಿವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ, ರಾಜ್ಯ ಕಾರ್ಯದರ್ಶಿ ಅಂಬುದಾಸ್, ಸಿಇಒ ಪ್ರಶಾಂತ್ ಕುಮಾರ್ ಹಾಗೂ ಹಿರಿಯ ಅಧಿಕಾರಿ ಚಾರುಲತಾ ಸೋಮಲ್ ಉಪಸ್ಥಿತರಿದ್ದರು. 

ತಿಂಗಳ ವೇತನ ನೀಡಿದ ಸಚಿವ ಸಾ.ರಾ.ಮಹೇಶ್
ಕೊಡಗಿನ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರಿಗೆ ನೆರವು ನೀಡಲು ಸ್ಥಾಪಿಸಲಾಗಿರುವ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ತಮ್ಮ ಒಂದು ತಿಂಗಳ ವೇತನವನ್ನು ನೀಡುವುದಾಗಿ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News