ಕೊಡಗು ಮಹಾಹಾನಿ: ವೈದ್ಯಕೀಯ ನೆರವಿನ ಗೂಗಲ್ ಡಾಕ್‍ಗೆ ಉತ್ತಮ ಸ್ಪಂದನೆ

Update: 2018-08-21 17:01 GMT

ಮಡಿಕೇರಿ, ಆ.21: ಪ್ರಕೃತಿ ವಿಕೋಪಕ್ಕೆ ಸಿಲುಕಿ ನಲುಗಿರುವ ಕೊಡಗಿನಲ್ಲಿ ಪರಿಹಾರ ಕಾರ್ಯದಲ್ಲಿ ನೆರವಾಗಲು ಇಚ್ಚಿಸುವ ವೈದ್ಯರಿಗಾಗಿ ರಾಜ್ಯ ಆರೋಗ್ಯ ಇಲಾಖೆ ಆರಂಭಿಸಿರುವ ಗೂಗಲ್ ಡಾಕ್ ಗೆ ಉತ್ತಮ ಸ್ಪಂದನೆ ದೊರಕಿದ್ದು, ರಾಜ್ಯಾವ್ಯಾಪಿ 170 ವೈದ್ಯರು, 50 ಶುಶ್ರೂಕಿಯರು ನೋಂದಾಯಿಸಿಕೊಂಡಿದ್ದಾರೆ. 

ಕೊಡಗು ಜಿಲ್ಲೆಯ 41 ಪುನರ್ ವಸತಿ ಕೇಂದ್ರಗಳಿಗೆ ವೈದ್ಯರು, ಮೂವರು ದಾದಿಯರಂತೆ 55 ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದ್ದು, ಒಟ್ಟು 170 ವೈದ್ಯರನ್ನು ತಾತ್ಕಾಲಿಕವಾಗಿ ಕೊಡಗಿಗೆ ನಿಯೋಜಿಸಲಾಗುತ್ತದೆ ಎಂದು ರಾಜ್ಯ ಆರೋಗ್ಯ ಸಚಿವ ಶಿವರಾಜ್ ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕೊಡಗಿನಲ್ಲಿ ಕೈಗೊಂಡ ಮುಂಜಾಗೃತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಶಿವರಾಜ್ ಪಾಟೀಲ್, ಕೊಡಗು ಜಿಲ್ಲೆಗೆ ಅವಶ್ಯಕತೆಯಿದ್ದ ತಜ್ಞ ವೈದ್ಯರುಗಳನ್ನೂ ಇನ್ನೊಂದು ವಾರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಅಂತೆಯೇ ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲಾ ರೀತಿಯಲ್ಲಿಯೂ ಮುಂಜಾಗ್ರತೆ ವಹಿಸಲಾಗುತ್ತಿದ್ದು, ಜಿಲ್ಲೆಯಾದ್ಯಂತ ಸಂಚರಿಸಲು 7 ಆರೋಗ್ಯ ಕ್ಷಿಪ್ರಪಡೆ ರಚಿಸಲಾಗಿದೆ ಎಂದು ತಿಳಿಸಿದರು.

ಮನೆ, ಆಸ್ತಿ ಕಳೆದುಕೊಂಡು ಮಾನಸಿಕವಾಗಿ ಧೈರ್ಯ ಕಳೆದುಕೊಂಡವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯಗಳು ನಡೆಯಲಿದ್ದು, ಸರ್ಕಾರದ ಉತ್ತಮ ಕಾರ್ಯಯೋಜನೆಗಳು ಮತ್ತು ಸರ್ಕಾರ ಸದಾ ನಿಮ್ಮೊಂದಿಗಿದೆ ಎಂಬ ಭರವಸೆಯನ್ನು ಸಂತ್ರಸ್ತರಲ್ಲಿ ಮೂಡಿಸಲಾಗುತ್ತದೆ ಎಂದು ಸಚಿವ ಶಿವರಾಜ್ ಪಾಟೀಲ್ ಹೇಳಿದರು.

ಪರಿಹಾರ ಕಾರ್ಯಕ್ಕೆ ಸಹಾಯವಾಗುವಂತೆ ಜಿಲ್ಲೆಯಲ್ಲಿ ಎಲ್ಲಾ ಔಷಧಿಗಳನ್ನು ದಾಸ್ತಾನು ಮಾಡಲಾಗಿದೆ. ಜಿಲ್ಲೆಯಲ್ಲಿನ ಎಲ್ಲಾ ಅಂಬ್ಯುಲೆನ್ಸ್ ಜತೆಗೆ ಖಾಸಗಿ ಅಂಬ್ಯುಲೆನ್ಸ್ ಗಳನ್ನೂ ಬಳಸಲಾಗುತ್ತಿದೆ. ಹೊರ ಜಿಲ್ಲೆಗಳಿಂದಲೂ ಅಂಬ್ಯುಲೆನ್ಸ್ ತರಿಸಲಾಗಿದೆ ಎಂದು ಸಚಿವ ಶಿವರಾಜ್ ಪಾಟೀಲ್ ಮಾಹಿತಿ ನೀಡಿದರು.

ಕಾವೇರಿ ನದಿ ಪ್ರವಾಹದಿಂದ ಮುಳುಗಡೆಯಾಗಿದ್ದ ಕುಶಾಲನಗರ ಮತ್ತು ಆ ವ್ಯಾಪ್ತಿಯ ಊರುಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಬೆಂಗಳೂರಿನಿಂದ ಕರೆ ತರಲಾಗಿರುವ 300 ಪೌರ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಮೂರು ಸ್ಥಳಗಳಲ್ಲಿ ಟೆಲಿ ಮೆಡಿಸಿನ್ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ ಮತ್ತು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ನೇರವಾಗಿ ಅಂತರ್ಜಾಲ ಮೂಲಕ ಸಂಪರ್ಕ ಕಲ್ಪಿಸಿ ರೋಗಿಗಳಿಗೆ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಆ.18 ರಿಂದ 20 ರವರೆಗೆ ಜಿಲ್ಲೆಯಲ್ಲಿ 7193 ಸಂತ್ರಸ್ಥರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ . ಪ್ರಕೃತಿ ವಿಕೋಪ ಸಂತ್ರಸ್ಥರಿಗೆ ಕೊಡಗು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಅವಕಾಶ ನೀಡಲಾಗಿದೆ. ಆಸ್ಪತ್ರೆಗಳಲ್ಲಿನ ಶೇ 50 ರಷ್ಟು ಹಾಸಿಗೆಗಳನ್ನು ರೋಗಿಗಳಿಗೆ ನೀಡಿ, ಮತ್ತೆ ಉಳಿದ ಶೇ.50 ರಷ್ಟು ಹಾಸಿಗೆಗಳನ್ನು ಸಂತ್ರಸ್ತರಿಗೆ ನೀಡಲಾಗುತ್ತದೆ. ಆಸ್ಪತ್ರೆಯಲ್ಲಿ ಸಂತ್ರಸ್ತರಿಗೆ ಊಟ, ತಿಂಡಿ ನೀಡಲಾಗುತ್ತದೆ. ಎಲ್ಲಾ ಪುನರ್ ವಸತಿ ಕೇಂದ್ರಗಳಿಗೆ  ಅಡುಗೆಯ 2 ಸಿಲಿಂಡರ್ ಗಳನ್ನು ನೀಡಲಾಗುತ್ತದೆ ಎಂದು ರಾಜ್ಯ ಆರೋಗ್ಯ ಖಾತೆ ಸಚಿವ ಶಿವರಾಜ ಎಸ್.ಪಾಟೀಲ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಉಪಸ್ಥಿತರಿದ್ದರು. 

ಸಹಾಯವಾಣಿ
ಸಂತ್ರಸ್ತರಿಗಾಗಿ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದೆ. ಅಗತ್ಯವುಳ್ಳವರು ಸಂಪಕಿ9ಸಬೇಕಾದ ಸಂಖ್ಯೆ - 9449843117, ಆರೋಗ್ಯ ಇಲಾಖೆಯ ರಾಜ್ಯ ಸಹಾಯವಾಣಿ -104.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News