ಲಕ್ಷಾಂತರ ರೂ. ಮೌಲ್ಯದ ಹೊನ್ನೆ ಮರ ಅಕ್ರಮ ಸಾಗಣೆ ಆರೋಪ: ಲಾರಿ ವಶ
Update: 2018-08-21 22:46 IST
ಚಿಕ್ಕಮಗಳೂರು, ಆ.21: ಲಕ್ಷಾಂತರ ರೂ. ಮೌಲ್ಯದ ಹೊನ್ನೆ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖಾಧಿಕಾರಿಗಳು ಮರದ ತುಂಡುಗಳನ್ನು ತುಂಬಿದ್ದ ಲಾರಿಯೊಂದನ್ನು ವಶಕ್ಕೆ ಪಡೆದ ಘಟನೆ ತಾಲೂಕಿನ ಆಲ್ದೂರು ಸಮೀಪದಲ್ಲಿ ನಡೆದಿದೆ.
ಲಕ್ಷಾಂತರ ರೂ. ಮೌಲ್ಯದ ಹೊನ್ನೆ ಮರಗಳನ್ನು ಕಡಿದು ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬಗ್ಗೆ ಆಲ್ದೂರು ವಲಯಾರಣ್ಯಾಧಿಕಾರಿಗಳಿಗೆ ಬಂದ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿ ರಾಜು ನೇತೃತ್ವದ ತಂಡ ಆಲ್ದೂರು ಸಮೀಪದ ಮಾವಿನಗುಣಿ ಎಂಬಲ್ಲಿ ಲಾರಿ ಮೇಲೆ ದಾಳಿ ನಡೆಸಿದೆ. ಈ ವೇಳೆ ಲಾರಿ ಚಾಲಕ ಸೇರಿದಂತೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ. ಹೆಡದಾಳು ಗ್ರಾಮದ ಚೇತನ್‍ಗೌಡ ಹಾಗೂ ಜಗದೀಶ್ ಪರಾರಿಯಾದ ಆರೋಪಿಗಳೆಂದು ತಿಳಿದುಬಂದಿದೆ. ಅರಣ್ಯಾಧಿಕಾರಿಗಳು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆಂದು ತಿಳಿದು ಬಂದಿದೆ.