×
Ad

ತೀರ್ಥಹಳ್ಳಿ-ಕುಂದಾಪುರ ಹೆದ್ದಾರಿಯಲ್ಲಿ ಘನ ವಾಹನ ಸಂಚಾರ ನಿಷೇಧ: ಶಿವಮೊಗ್ಗ ಡಿ.ಸಿ. ಆದೇಶ

Update: 2018-08-21 23:17 IST

ಶಿವಮೊಗ್ಗ, ಆ. 21: ತೀರ್ಥಹಳ್ಳಿ-ಕುಂದಾಪುರ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ-52 (ಕಿ.ಮೀ. 20.40 ರಿಂದ 43.90 ರವರೆಗೆ) ರಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿದೆ. ಅಲ್ಲದೇ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗುತ್ತಿದೆ ಹಾಗೂ ಮೇಲಿನ ರಸ್ತೆ ಭಾಗವು ಎಲ್ಲಾ ವಾಹನಗಳ ದಟ್ಟಣೆಯನ್ನು ಸುರಕ್ಷಿತ ಭಾರ ತಾಳುವ ಸಾಮರ್ಥ್ಯ ಇಲ್ಲದಿದ್ದುದರಿಂದ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಠಿಯಿಂದ ಭಾರೀ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಆದೇಶ ಹೊರಡಿಸಿದ್ದಾರೆ.

ನಿಗಧಿಪಡಿಸಿದ ಸಾಮರ್ಥ್ಯಕ್ಕಿಂತ ಹೆಚ್ಚಿನ ಭಾರ ಹೊರುವ ವಾಹನಗಳು ಹಾಗೂ ನಿಗದಿತ ವಾಹನಗಳ ಸಂಖ್ಯೆಗಿಂತ ಹೆಚ್ಚಿನ ಹೋಗಿ-ಬರುವ ವಾಹನಗಳ ಸಂಚಾರದಿಂದ ವ್ಯತ್ಯಾಸವಾಗಿ ವಾಹನಗಳ ಸಂಚಾರಕ್ಕೆ ತಡೆಯಾಗುತ್ತಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ಕಳೆದ ವರ್ಷಕ್ಕಿಂತ ಈ ವರ್ಷದ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಭೂಗತ ಜಲಮಟ್ಟ ರಸ್ತೆ ಮೇಲ್ಮೈವರೆಗೆ ಏರಿದ್ದು, ಸುರಕ್ಷಿತ ವಾಹನ ಸಾಂಧ್ರತೆ ಕಡಿಮೆಯಾಗಬೇಕಾಗಿರುವ ಹಿನ್ನೆಲೆಯಲ್ಲಿ ರಸ್ತೆ ಪದರ ಶಿಥಿಲಗೊಂಡು ಸರಕು ಸಾಗಣೆ ಹಾಗೂ ಸಾರ್ವಜನಿಕ ಪ್ರಯಾಣಕ್ಕೆ ತೀವ್ರತರಹದ ಅಡಚಣೆ ಉಂಟಾಗುತ್ತಿರುವುದನ್ನು ಗಮನಿಸಲಾಗಿದೆ ಎಂದವರು ಆದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ಬುಲೆಟ್ ಟ್ಯಾಂಕರ್ಸ್, ಪಿಪ್ ಕಾರ್ಗೋ ಕಂಟೈನರ್ಸ್, ಹಾಗೂ ಲಾಂಗ್‍ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿಎಕ್ಸೆಲ್ ಟ್ರಕ್ಸ್, ಟ್ರಕ್‍ಟ್ರೈಲರ್ ಮತ್ತು ಎಲ್ಲಾ ಬಗೆಯ ಅಧಿಕ ಭಾರದ ಸರಕು ಸಾಗಣೆ ವಾಹನಗಳನ್ನು ಈ ಹೆದ್ದಾರಿಯಲ್ಲಿ ಸಂಚರಿಸುವುದನ್ನು ನಿಷೇಧಿಸಿರುವುದಾಗಿ ತಿಳಿಸಿದ್ದಾರೆ.

ಕಾರು, ಜೀಪು, ವ್ಯಾನ್, ಎಲ್.ಸಿ.ವಿ.,(ಮಿನಿ ವ್ಯಾನ್) ಹಾಗೂ ದ್ವಿಚಕ್ರವಾಹನಗಳು, ರಾಜಹಂಸ, ಸಾರ್ವಜನಿಕರು ಪ್ರಯಾಣಿಸುವ ಬಸ್ಸುಗಳ ಸಂಚಾರಕ್ಕೆ ಮುಕ್ತವಾಗಿದೆ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News