ಭಾರೀ ಮಳೆ: ಸಂಪರ್ಕ ಕಡಿದುಕೊಂಡ 13 ಗ್ರಾಮಗಳು
ಬೆಳಗಾವಿ/ಬೆಂಗಳೂರು, ಆ. 22: ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ 13 ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ.
ಸತತ ಮಳೆಯಿಂದ ಮಹದಾಯಿ ನದಿ ತುಂಬಿ ಹರಿಯುತ್ತಿದ್ದು, ಖಾನಾಪುರ ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಪ್ರಮುಖ ರಸ್ತೆಗಳ ಸಂಪರ್ಕ ಸಂಪೂರ್ಣ ಕಡಿದುಕೊಂಡಿದ್ದು, ಗ್ರಾಮಗಳು ಅಕ್ಷರಶಃ ನಡುಗಡ್ಡೆಗಳಾಗಿವೆ.
ಭಾರಿ ಮಳೆಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯರನ್ನು ಗವಾಳಿ ಗ್ರಾಮದ ಜನರು ಬಿದಿರಿನ ಜೋಲಿಯಲ್ಲಿ ಹೊತ್ತು ನದಿ ದಾಟಿಸಿ ಖಾನಾಪುರಕ್ಕೆ ಕರೆತರುತ್ತಿದ್ದು, ಖಾನಾಪುರ ಸರಕಾರಿ ಆಸ್ಪತ್ರೆಗೆ ರೋಗಿಗಳನ್ನು ದಾಖಲಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಮಳೆಯಿಂದ ಅರಣ್ಯ ಪ್ರದೇಶದಲ್ಲಿ ಶೀತ ವಾತಾವರಣ ಹೆಚ್ಚಾಗಿ ಮಹಿಳೆಯರು, ಮಕ್ಕಳು, ವೃದ್ಧರು ತೀವ್ರ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅವರನ್ನು ಸಕಾಲದಲ್ಲಿ ಆಸ್ಪತ್ರೆಗೆ ಕೊಂಡೊಯ್ಯುಲು ರಸ್ತೆ ಸಂಪರ್ಕ ಇಲ್ಲದ ಕಾರಣ ಗ್ರಾಮಸ್ಥರು ಪರದಾಡುವಂತಾಗಿದೆ.