ನಿರಾಶ್ರಿತರ ಮಕ್ಕಳಿಗೆ ಶಿಕ್ಷಣಕ್ಕೆ ಕ್ರಮ ವಹಿಸಲು ಕೇಂದ್ರ ಸಚಿವ ಸದಾನಂದಗೌಡ ಆಗ್ರಹ
ಬೆಂಗಳೂರು, ಆ. 22: ಕೊಡಗಿನ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿರುವ ಶಾಲಾ ಮಕ್ಕಳು ವಿದ್ಯೆಯಿಂದ ವಂಚಿತರಾಗುತ್ತಿದ್ದು, ರಾಜ್ಯ ಸರಕಾರ ಕೂಡಲೇ ಈ ಶಾಲಾ ಮಕ್ಕಳ ಪಟ್ಟಿ ಮಾಡಿ ಅವರಿಗೆ ತಕ್ಷಣ ಅವಶ್ಯ ಪಠ್ಯಪುಸ್ತಕಗಳನ್ನು ಒದಗಿಸಬೇಕು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆಗ್ರಹಿಸಿದ್ದಾರೆ.
ಮಕ್ಕಳ ಪೋಷಕರು ಒಪ್ಪಿದರೆ ರಾಜ್ಯದಲ್ಲಿರುವ ವಿವಿಧ ವಸತಿ ಶಾಲೆಗಳಲ್ಲಿ ಉಚಿತವಾಗ ಈ ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಮಾಡಬೇಕು. ಸಂಕಷ್ಟದ ಸಮಯದಲ್ಲಿ ಹೆತ್ತವರು ಮಾನಸಿಕವಾಗಿ ನೊಂದಿರುವುದರಿಂದ ಮಕ್ಕಳನ್ನು ದೂರದ ಊರಿಗೆ ಕಳುಹಿಸಲು ಒಪ್ಪದಿದ್ದರೆ ಲಭ್ಯವಿರುವ ಸ್ಥಳದಲ್ಲಿ ತಾತ್ಕಾಲಿಕ ಶಾಲೆ ಅಥವಾ ವಿಶೇಷ ವಸತಿ ಶಾಲೆಯನ್ನು ಆರಂಭಿಸಬೇಕು ಎಂದು ಡಿವಿಎಸ್ ಟ್ವಿಟ್ ಮಾಡಿದ್ದಾರೆ.
ಪರಿಹಾರ ಕೇಂದ್ರಗಳಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸಮಿತಿ ರಚಿಸಿ ಅಗತ್ಯ ಆಗಬೇಕು. ಈ ಮಾಹಿತಿ ನೀಡಿದರೆ ಕೇಂದ್ರ ಸರಕಾರದಿಂದ ಆಗಬೇಕಾದ ವ್ಯವಸ್ಥೆಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ನೆರವು ಕೊಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಯಾವುದೇ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು. ವಸತಿ ಶಾಲೆಗೆ ದಾಖಲಾಗುವ ಮಕ್ಕಳಿಗೆ ದೈನಂದಿನ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಅವರ ಹೆಸರಿನಲ್ಲಿ ಖಾತೆ ತೆಗೆದು ಹಣವನ್ನು ಅವರ ದೈನಂದಿನ ಖರ್ಚಿಗೆ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಸದಾನಂದಗೌಡ ಸೂಚಿಸಿದ್ದಾರೆ.