×
Ad

ತೀವ್ರಗೊಂಡ ಡ್ರೋಣ್ ಕಾರ್ಯಾಚರಣೆ : ಅಧಿಕಾರಿಗಳಿಂದ ವೈಮಾನಿಕ ಸಮೀಕ್ಷೆ

Update: 2018-08-22 22:39 IST

ಮಡಿಕೇರಿ, ಆ. 22 : ಮಹಾಮಳೆ ಮತ್ತು ಭೂ ಕುಸಿತದಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ವೈಮಾನಿಕ ಸಮೀಕ್ಷೆ ನಡೆಸಿದರು.

ಹಾರಂಗಿ, ಮಕ್ಕಂದೂರು, ಜೋಡುಪಾಲ, ಮುಕ್ಕೋಡ್ಲು, ಕಾಲೂರು ಹಾಗೂ ಮಡಿಕೇರಿ ಭಾಗದಲ್ಲಿ ಸಮೀಕ್ಷೆ ನಡೆಸಿದ ಜಿಲ್ಲಾಡಳಿತ, ಪ್ರಕೃತಿ ವಿಕೋಪದ ತೀವ್ರತೆಯ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭ ಜಿಲ್ಲಾಧಿಕಾರಿ ಶ್ರೀವಿದ್ಯಾ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಶುಕ್ರವಾರದಿಂದ ಬೆಳೆ ಹಾನಿ ಸಮೀಕ್ಷೆಯನ್ನು ನೂತನ ತಂತ್ರಜ್ಞಾನದ ಮೂಲಕ ನಡೆಸಿ ನಂತರ ಪರಿಹಾರವನ್ನು ವಿತರಣೆ ಮಾಡಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಮಡಿಕೇರಿ-ಮಂಗಳೂರು ರಸ್ತೆ ಗುಡ್ಡ ಕುಸಿತದಿಂದ ಸಂಪರ್ಕವನ್ನು ಕಳೆದುಕೊಂಡಿದ್ದು, ಸುಳ್ಯಕ್ಕೆ ಸಂಪರ್ಕ ಕಲ್ಪಿಸುವ ಭಾಗಮಂಡಲ-ಕರಿಕೆ ಮೂಲಕ ಹಾದು ಹೋಗಲು ಮಡಿಕೇರಿಯಿಂದ ಸುಳ್ಯದವರೆಗೆ ಮಿನಿ ಬಸ್‌ಗಳ ಸಂಚಾರವನ್ನು ಆರಂಭಿಸಲಾಗಿದೆ.

ಈ ನಡುವೆ ಸೇನಾ ಪಡೆಗೆ ಸೇರಿದ ಡ್ರೋಣ್ ಸೇರಿದಂತೆ ಇತರೆ 8 ಡ್ರೋಣ್‌ಗಳ ಸಹಾಯದಿಂದ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿ, ನಾಶಗೊಂಡ ಮನೆಗಳು, ಕೃಷಿ ಭೂಮಿ ಹಾಗೂ ಮೃತದೇಹಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೆಲವು ಮೃತದೇಹಗಳು ಗೋಚರಿಸಿದ ಬಗ್ಗೆಯೂ ಮಾಹಿತಿ ಲಭಿಸಿದೆಯಾದರು, ಸ್ಥಳಕ್ಕೆ ತೆರಳಿ ಮೃತದೇಹವನ್ನು ಹೊರತೆಗೆಯಲು ಅಗತ್ಯ ಮಾರ್ಗದ ವ್ಯವಸ್ಥೆಯನ್ನು ಮಾಡಿಕೊಂಡ ಬಳಿಕವಷ್ಟೆ ನಿಖರವಾಗಿ ಸಾವನ್ನಪ್ಪಿದವರ ಬಗ್ಗೆ ಮಾಹಿತಿ ಲಭ್ಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News