ಕೊಡಗಿನ ನಿರಾಶ್ರಿತರಿಗೆ ಮನೆ, ಶಿಕ್ಷಣ ನೀಡಲು ಸಿದ್ಧ : ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
ಮಡಿಕೇರಿ, ಆ. 23 : ಜೆಎಸ್‌ಎಸ್ ಸಂಸ್ಥೆಗಳ ವತಿಯಿಂದ ಕೊಡಗಿನ ನಿರಾಶ್ರಿತರಿಗೆ ಮನೆ ಮತ್ತು ಮಕ್ಕಳಿಗೆ ಶಿಕ್ಷಣ ನೀಡಲು ಸಿದ್ಧ ಎಂದು ಮೈಸೂರು ಜೆಎಸ್‌ಎಸ್ ಮಹಾಸಂಸ್ಥಾನದ ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪ್ರಕಟಿಸಿದ್ದಾರೆ.
ಪ್ರಕೃತಿ ವಿಕೋಪಕ್ಕೆ ತುತ್ತಾದ ಕೊಡಗಿನ ಮುಕ್ಕೋಡ್ಲು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಸ್ವಾಮೀಜಿ ತರುವಾಯ ಮಡಿಕೇರಿಯಲ್ಲಿ ನಿರಾಶ್ರಿತ ಶಿಬಿರಗಳಿಗೆ ಭೇಟಿ ನೀಡಿ ನಿರಾಶ್ರಿತರಿಗೆ ಸಾಂತ್ವನ ಹೇಳಿದರಲ್ಲದೇ ಮಾನಸಿಕ ಸ್ಥೈರ್ಯ ತುಂಬಿದರು.
ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನಿರಾಶ್ರಿತರನ್ನುದ್ದೇಶಿಸಿ ಮಾತನಾಡಿದ ಸ್ವಾಮೀಜಿ, ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಚಿಂತನೆ ಹರಿಸಲಾಗುತ್ತಿದೆ. ಅಂತೆಯೇ ನಿರಾಶ್ರಿತ ಮಕ್ಕಳಿಗೆ ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆಯ ವಸತಿ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ. ಆಸಕ್ತಿಯಿರುವ ಮಕ್ಕಳನ್ನು ಕೊಡಗಿಗೇ ಬಂದು ಸಂಸ್ಥೆಯ ವಾಹನಗಳಲ್ಲಿ ಕರೆದೊಯ್ಯಲಾಗುತ್ತದೆ ಎಂದೂ ಭರವಸೆ ನೀಡಿದರು.
ಭೂಮಿ ಒಮ್ಮೆಲೆ ಜರಿದು ಹೋಗಿ ಮಾನವರ ಜೀವನವನ್ನೇ ಅಲ್ಲೋಲಕಲ್ಲೋಲ ಮಾಡಿದೆ. ಮಣ್ಣು, ಕಲ್ಲಿಗೆ ಯಾವುದೇ ಭಾವನೆಗಳಿರುವುದಿಲ್ಲ. ಅವುಗಳಿಗೆ ಕಷ್ಟ, ನಷ್ಟದ ತಿಳುವಳಿಕೆಯೂ ಇರುವುದಿಲ್ಲ. ಮನುಷ್ಯ ಮಾತ್ರ ಇಂಥ ಸಂದಭರ್ನೋವು ಅನುಭವಿಸುತ್ತಾನೆ ಎಂದು ವಿಶ್ಲೇಶಿಸಿದ ಸ್ವಾಮೀಜಿ, ಭಗವಂತ ತಾನಾಗಿಯೇ ಕೊಟ್ಟ ಕಷ್ಟಗಳಿಗೆ ತಾನೇ ಸೂಕ್ತ ಪರಿಹಾರವನ್ನೂ ಕೊಡುತ್ತಾನೆ. ಹೀಗಾಗಿಯೇ ಸಂಕಟದಲ್ಲಿರುವ ಕೊಡಗಿನ ಜನರಿಗೆ ಭಾರೀ ಪ್ರಮಾಣದಲ್ಲಿ ಪರಿಹಾರ ಸಾಮಗ್ರಿಗಳು ಬರುತ್ತಿದೆ ಎಂದರು. ಯಾವುದೇ ಕಾರಣಕ್ಕೂ ನಿರಾಶ್ರಿತರು ನೋವುಣ್ಣದೇ, ಸೈರ್ಯ ಕುಂದದೇ ಮುಂದಿನ ಜೀವನವನ್ನು ಮತ್ತಷ್ಟು ಯೋಗ್ಯವಾಗಿ ಕಳೆಯುವ ನಿಟ್ಟಿನಲ್ಲಿ ಧೈರ್ಯಪಡೆಯಬೇಕೆಂದೂ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಆತ್ಯಸ್ಥೆರ್ಯ ತುಂಬಿದರು.
ಕಿರಿಕೊಡ್ಲಿ ಮಠಾಧೀಶ ಸೇರಿದಂತೆ ಹಲವಾರು ಮಠಾಧೀಶರು ವೇದಿಕೆಯಲ್ಲಿದ್ದರು. ಭಾರತೀಯ ವಿದ್ಯಾಭವನ ಕೊಡಗು ಘಟಕದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ನಿರೂಪಿಸಿದರು. ಸೋಮವಾರಪೇಟೆ ತಾಲ್ಲೂಕಿನ ವಿವಿಧ ಪರಿಹಾರ ಕೇಂದ್ರಗಳಿಗೂ ಭೇಟಿ ನೀಡಿದ ಮಠಾಧೀಶರುಗಳು ನೊಂದವರಿಗೆ ಸಾಂತ್ವನ ಹೇಳಿದರು.