ಕಾಂಡನಕೊಲ್ಲಿಯಲ್ಲಿ ವೃದ್ಧ ದಂಪತಿಗಳ ರಕ್ಷಣೆ: ಸಾವನ್ನೇ ಗೆದ್ದು ಬಂದ ಶತಾಯುಷಿ ಕಾವೇರಮ್ಮ
ಮಡಿಕೇರಿ, ಆ.23: ಮಹಾಮಳೆಯಿಂದ ಗ್ರಾಮಕ್ಕೆ ಗ್ರಾಮವೇ ಕೆಸರಿನಾರ್ಭಟದಲ್ಲಿ ಸಿಲುಕಿ ಹಲವು ಸಾವು ನೋವುಗಳು ಸಂಭವಿಸಿದ್ದರೂ, 103 ವರ್ಷ ಪ್ರಾಯದ ಕಾವೇರಮ್ಮ ಅವರು ಸಾವನ್ನು ಗೆದ್ದು ಬಂದಿದ್ದಾರೆ.
ಮುಕ್ಕೋಡ್ಲುವಿನ ತಮ್ಮ ಮನೆಯಲ್ಲಿ ನಡೆಯಲಾಗದ ಸ್ಥಿತಿಯಲ್ಲಿದ್ದ ಅವರು, ಮಹಾಮಳೆಯಿಂದಾಗಿ ಏನೂ ಮಾಡಲಾಗದೆ, ಅತಂತ್ರ ಸ್ಥಿತಿಯಲ್ಲಿ ಪಕ್ಕದ ಮನೆಯವರ ನಿಗಾದಲ್ಲಿದ್ದರು. ಗ್ರಾಮ ದ್ವೀಪದಂತಾಗಿದ್ದ ಕಾರಣ, ಗ್ರಾಮಸ್ಥರಿಂದಲೂ ಕಾವೇರಮ್ಮ ಅವರನ್ನು ರಕ್ಷಿಸಲು ಸಾಧ್ಯವಾಗಿರಲಿಲ್ಲ. ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ಸಂತ್ರಸ್ತರನ್ನು ರಕ್ಷಿಸುವ ಕಾರ್ಯಾಚರಣೆ ಚುರುಕು ಗೊಂಡಿದ್ದು, ಇಂದು ಗ್ರಾಮಸ್ಥರು ಹಾಗೂ ಕಾರ್ಯಾಚರಣೆ ತಂಡ ಮನೆಯೊಳಗೆ ಅಸಹಾಯಕ ಸ್ಥಿತಿಯಲ್ಲಿದ್ದ ಕಾವೇರಮ್ಮ ಅವರನ್ನು ರಕ್ಷಿಸಿದ್ದಾರೆ. ನಡೆಯಲಾಗದೆ ನಿಶಕ್ತರಾಗಿದ್ದ ಅವರನ್ನು ಗ್ರಾಮಸ್ಥರು ಎತ್ತಿಕೊಂಡು ಬಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಮಹಾಮಳೆಯಿಂದ ಸಂತ್ರಸ್ತರಾದ ಜನರನ್ನು ರಕ್ಷಿಸುವ ಕಾರ್ಯಾಚರಣೆ ಗುರುವಾರವೂ ಮುಂದುವರೆದಿದ್ದು, ಲೈನ್‍ಮನೆಯೊಂದರಲ್ಲಿ ಸಿಲುಕಿದ್ದ ವೃದ್ಧ ದಂಪತಿಗಳನ್ನು ಎನ್‍ಡಿಆರ್‍ಎಫ್, ಪೊಲೀಸ್, ಅಗ್ನಿಶಾಮಕ ದಳ ಮತ್ತು ಸ್ಥಳೀಯರು ರಕ್ಷಿಸಿದ್ದಾರೆ.
ಹೆಮ್ಮೆತ್ತಾಳು ಸಮೀಪದ ಕಾಂಡನಕೊಲ್ಲಿ ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಸಂಪರ್ಕವಿಲ್ಲದೆ ತೋಟದ ಲೈನ್ ಮನೆಯಲ್ಲಿ ಪಳನಿ ಮತ್ತು ಶಾಂತ ದಂಪತಿಗಳು ಕಳೆದು 4 ದಿನಗಳಿಂದ ಸಿಲುಕಿದ್ದರು. ಮೊಬೈಲ್ ಸಂಪರ್ಕ ವ್ಯವಸ್ಥೆಯಿಲ್ಲದ್ದರಿಂದಾಗಿ ಈ ವೃದ್ಧ ದಂಪತಿಗಳಿಗೆ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಮಾತ್ರವಲ್ಲದೆ ತೀವ್ರ ಅನಾರೋಗ್ಯ ಮತ್ತು ಹಸಿವಿನಿಂದ ಬಳಲಿದ ವೃದ್ಧ ದಂಪತಿಗಳು ಬದುಕುವ ಆಸೆಯನ್ನೇ ಕೈ ಬಿಟ್ಟಿದ್ದರು. ಸ್ಥಳೀಯ ಗ್ರಾಮಸ್ಥರು ಕೂಡ ಈ ದಂಪತಿಗಳು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿರಬಹುದೆಂದು ಭಾವಿಸಿದ್ದರು.
ಆದರೆ ಯಾವುದೇ ಕೇಂದ್ರಗಳಲ್ಲೂ ಈ ದಂಪತಿಗಳು ಇಲ್ಲದಿರುವುದನ್ನು ಗಮನಿಸಿದ ಯುವಕರ ತಂಡ ತೋಟದ ಲೈನ್ ಮನೆಯಲ್ಲಿ ದಂಪತಿಗಳು ಸಿಲುಕಿಕೊಂಡಿರುವುದನ್ನು ಪತ್ತೆ ಹಚ್ಚಿದೆ. ಬಳಿಕ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಗುರುವಾರ ಬೆಳಿಗ್ಗೆ ಮಕ್ಕಂದೂರು ಮೇಘಾತ್ತಾಳುವಿನ ಮೂಲಕ ಕಾಂಡಕೊಲ್ಲಿ ತಲುಪಿದ ಎನ್‍ಡಿಆರ್‍ಎಫ್ ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳು ಸ್ಥಳೀಯ ಯುವಕ ನೇತೃತ್ವದಲ್ಲಿ ಲೈನ್ ಮನೆಯಲ್ಲಿ ಸಿಲುಕಿದ್ದ ದಂಪತಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಂಪತಿಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.