ಕೊಡಗು ಮಳೆಹಾನಿ: ಪ್ರಧಾನಿ ಭೇಟಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ; ತಜ್ಞರ ಸಮಿತಿ ರಚನೆಗೆ ಸಲಹೆ

Update: 2018-08-23 15:32 GMT

ಮಡಿಕೇರಿ, ಆ.23: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿಯಿಂದಾಗಿ 5 ರಿಂದ 6 ಸಾವಿರ ಮಂದಿ ನಿರಾಶ್ರಿತರಾಗಿರುವುದು ಅತ್ಯಂತ ದೊಡ್ಡ ಪ್ರಮಾಣದ ಹಾನಿಯಾಗಿದ್ದು, ಪ್ರಧಾನ ಮಂತ್ರಿ ಕೇರಳಕ್ಕೆ ಭೇಟಿ ನೀಡಿದಂತೆ ಕೊಡಗು ಜಿಲ್ಲೆಗೆ ಭೇಟಿ ನೀಡಿ ಸೂಕ್ತ ಪರಿಹಾರವನ್ನು ಘೋಷಿಸಬೇಕೆಂದು ಮಾಜಿ ಮುಖ್ಯ ಮಂತ್ರಿ ಹಾಗು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮತಿಯ ಅಧ್ಯಕ್ಷ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ವಿವಿಧ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿವೃಷ್ಟಿ ಪೀಡಿತ ಪ್ರದೇಶಗಳನ್ನು ವೀಕ್ಷಿಸಿದ ನಂತರ ದೊಡ್ಡ ಪ್ರಮಾಣದ ನಷ್ಟವಾಗಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಪ್ರಧಾನಮಂತ್ರಿಗಳು ಕೊಡಗು ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ತಕ್ಷಣ ಪರಿಹಾರವನ್ನು ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಕೇರಳ ರಾಜ್ಯಕ್ಕೆ 500 ಕೋಟಿ ರೂ.ಗಳ ಪರಿಹಾರವನ್ನು ನೀಡಿರುವುದು ಸ್ವಾಗತಾರ್ಹ. ಇದೇ ಮಾದರಿಯಲ್ಲಿ ಕೊಡಗು ಜಿಲ್ಲೆಗೂ ಪರಿಹಾರ ನೀಡಲಿ ಎಂದರು.

ಜಿಲ್ಲೆಯಲ್ಲಿ ಆಗಿರುವ ಕಷ್ಟ ನಷ್ಟಗಳ ಬಗ್ಗೆ ವರದಿ ತಯಾರಿಸಲು ತಜ್ಞರ ಸಮಿತಿಯನ್ನು ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವುದಾಗಿ ತಿಳಿಸಿದ ಸಿದ್ದರಾಮಯ್ಯ, ನಿರಾಶ್ರಿತರಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಸೃಷ್ಟಿಸುವಂತೆ ಸಚಿವ ಕೃಷ್ಣ ಬೈರೇಗೌಡ ಅವರಿಗೆ ತಿಳಿಸಿರುವುದಾಗಿ ಹೇಳಿದರು. ಸುಮಾರು 5 ರಿಂದ 6 ಸಾವಿರ ಮಂದಿ ನಿರಾಶ್ರಿತರಾಗಿದ್ದು, ತಾತ್ಕಾಲಿಕ ಮತ್ತು ಶಾಶ್ವತ ನೆಲೆ ಕಲ್ಪಿಸುವುದಕ್ಕಾಗಿ ಯೋಜನೆಯೊಂದನ್ನು ರೂಪಿಸುವಂತೆ ವಸತಿ ಸಚಿವ ಯು.ಟಿ. ಖಾದರ್ ಅವರಿಗೂ ಸಲಹೆ ನೀಡಿರುವುದಾಗಿ ತಿಳಿಸಿದರು.

ವಿದ್ಯಾರ್ಥಿಗಳು ವಿದ್ಯಾರ್ಜನೆಯಿಂದ ವಂಚಿತರಾಗದಂತೆ ವಿದ್ಯಾರ್ಥಿ ನಿಲಯಗಳಿಗೆ ವಿದ್ಯಾರ್ಥಿಗಳನು ಸೇರ್ಪಡೆಗೊಳಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದರು. 1924 ಮತ್ತು 1964 ರಲ್ಲಿ ದಾಖಲೆ ಪ್ರಮಾಣದ  ಮಳೆಯಾಗಿದ್ದು, ಆ ಬಳಿಕ ಇದೀಗ ಅಂತಹ ಭಾರೀ ಮಳೆಯನ್ನು ಕಂಡಿದ್ದೇವೆ. ಮಡಿಕೇರಿಯಲ್ಲೆ 225 ಇಂಚಿಗೂ ಅಧಿಕ ಮಳೆಯಾಗಿದ್ದು, ನಿರಂತರ ಮಳೆಯಿಂದ ಕೆಲವು ಗ್ರಾಮಗಳೇ ನಾಶವಾಗಿದೆಯೆಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಸಂತ್ರಸ್ತರಿಗೆ ಮೊದಲ ಆದ್ಯತೆಯಾಗಿ ಗ್ರಾಮಗಳಿಗೆ ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸುವುದು, ಮನೆ ನಿರ್ಮಾಣ, ಶಿಕ್ಷಣ ವ್ಯವಸ್ಥೆ, ಆರೋಗ್ಯ ಸೌಲಭ್ಯ ನಿಡುವುದರೊಂದಿಗೆ ಎಪಿಎಲ್ ಮತ್ತು ಬಿಪಿಎಲ್ ಪಡಿತರದಾರರೆಲ್ಲರಿಗೂ ಆಹಾರ ಸಾಮಗ್ರಿ ನೀಡುವಂತೆ ಮುಖ್ಯ ಮಂತ್ರಿಗಳಿಗೆ ತಿಳಿಸುವುದಾಗಿ ಹೇಳಿದರು. 
ಭೂ ಹಂಚಿಕೆಯ ಕುರಿತು ಯೋಜನೆ ತಯಾರಿಸಲು ಈಗಾಗಲೆ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದ್ದು. ಬೆಳೆಹಾನಿ ಬಗ್ಗೆಯೂ ವರದಿ ತಯಾರಿಸುವಂತೆ ಹೇಳಲಾಗಿದೆ. ಅತಿವೃಷ್ಟಿಯಿಂದ 10 ಮಂದಿ ಸಾವನ್ನಪ್ಪಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಶಾಸಕರು, ಸಂಸದರು, ರಾಜ್ಯ ಸಭಾ ಸದಸ್ಯರು ಒಂದು ತಿಂಗಳ ವೇತನವನ್ನು ಕೊಡಗು ಜಿಲ್ಲೆಗೂ ಮತ್ತೊಂದು ತಿಂಗಳ ವೇತನವನ್ನು ಕೇರಳ ರಾಜ್ಯಕ್ಕೆ ನೀಡಲು ನಿರ್ಧರಿಸಿರುವುದಾಗಿ ಸಿದ್ದರಾಮಯ್ಯ ಹೇಳಿದರು.

ಸರ್ಕಾರ ಉತ್ತಮ ರೀತಿಯಲ್ಲೆ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದು, ಇನ್ನಷ್ಟು ಚುರುಕು ಗೊಳ್ಳುವ ಅಗತ್ಯವಿದೆ ಎಂದರು. ಕೆಪಿಸಿಸಿ ಮೂಲಕವೂ ಪರಿಹಾರ ಸಮಿತಿಯನ್ನು ರಚಿಸಿದ್ದು, ರಾಜ್ಯ ಸಭಾ ಸದಸ್ಯ ರಾಮಮೂರ್ತಿ ಅಧ್ಯಕ್ಷತೆಯ ಸಮಿತಿ ಸಧ್ಯದಲ್ಲೆ ಜಿಲ್ಲೆಗೆ ಭೇಟಿ ನೀಡಿ, 3 ದಿನ ತಂಗಲಿದೆ. ನಂತರ ಪಕ್ಷದ ವತಿಯಿಂದ ಯಾವ ರೀತಿ ಪರಿಹಾರ ನೀಡಬೇಕು ಎನ್ನುವ ಬಗ್ಗೆ ನಿರ್ಧರಿಸಲಾಗುವುದು. ಈಗಾಗಲೆ ಕೆಪಿಸಿಸಿಯ ವೈದ್ಯರ ಘಟಕದಿಂದ 50 ಮಂದಿ ವೈದ್ಯರು ಜಿಲ್ಲೆಗೆ ಆಗಮಿಸಿ ಸಂತ್ರಸ್ತರ ಆರೋಗ್ಯ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಸಾಂಕ್ರಾಮಿಕ ರೋಗ ಹರಡದಂತೆ ಅಗತ್ಯ ಔಷಧಿಗಳನ್ನು ಪೂರೈಸುತ್ತಿದೆ ಎಂದರು.

600 ಕಿ.ಮೀ.ನಷ್ಟು ಗ್ರಾಮೀಣ ರಸ್ತೆಗಳು ಹಾಗೂ 150 ಕಿ.ಮೀ.ನಷ್ಟು ಲೋಕೋಪಯೋಗಿ ಇಲಾಖಾ ರಸ್ತೆಗಳು ಹಾನಿಗೀಡಾಗಿವೆ. ಒಟ್ಟು ಜಿಲ್ಲೆಯ ಹಾನಿ ಪ್ರದೇಶಗಳಿಗೆ ಕಾಯಕಲ್ಪ ನೀಡಲು ಮುಖ್ಯಮಂತ್ರಿ ಹಾಗೂ ಸಚಿವರುಗಳೊಂದಿಗೆ ಸಂಪರ್ಕದಲ್ಲಿ ಇರುವುದಲ್ಲದೆ, ಸಮನ್ವಯ ಸಮಿತಿಯಲ್ಲೂ ಚರ್ಚಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಪಕ್ಷ ರಚಿಸಿರುವ ಸಮಿತಿಯ ಮೂಲಕ ಹಣ ಸಂಗ್ರಹಿಸಿ, ಸಂತ್ರಸ್ತರಿಗೆ ನೀಡಲಾಗುವುದು. ಪಕ್ಷ ಸಂಗ್ರಹಿಸಿದ ಸಾಮಗ್ರಿಗಳು ಈಗಾಗಲೆ ಜಿಲ್ಲೆಯನ್ನು ತಲುಪಿದ್ದು, ವೈದ್ಯರುಗಳ ತಂಡ ಕೂಡ ಈಗಾಗಲೆ ಕಾರ್ಯೋನ್ಮುಖವಾಗಿದೆ. ಪಕ್ಷದ ವತಿಯಿಂದ ಅಗತ್ಯವಿರುವ ಕಡೆ ಸಹಕಾರವನ್ನು ನೀಡಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ತೃಪ್ತಿ ವ್ಯಕ್ತಪಡಿಸಿದರು.

ಈ ಸಂದರ್ಭ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಂಸದ ವಿಜಯಶಂಕರ್, ಎಂಎಲ್‍ಸಿ ವೀಣಾ ಅಚ್ಚಯ್ಯ, ಮಾಜಿ ಎಂಎಲ್‍ಸಿ ಎಂಸಿ.ನಾಣಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಹಾಗೂ ಮಿಟ್ಟು ಚಂಗಪ್ಪ, ಟಿ.ಪಿ.ರಮೇಶ್, ಕೆ.ಪಿ.ಚಂದ್ರಕಲಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News