ಕೊಡಗು ಮಹಾಮಳೆ: 5512 ಮಂದಿಗೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ; 9 ಸಾವು, 9 ನಾಪತ್ತೆ

Update: 2018-08-23 15:38 GMT

ಮಡಿಕೇರಿ, ಆ.23: ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆ ಮತ್ತು ಭೂ ಕುಸಿತದಿಂದ ಇದುವರೆಗೆ ಒಟ್ಟು 9 ಮಂದಿ ಸಾವಿಗೀಡಾಗಿದ್ದು, 9 ಮಂದಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಅಲ್ಲದೆ 5512 ಮಂದಿ ವಿವಿಧ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಜಿಲ್ಲಾಡಳಿತ ಅಧಿಕೃತವಾಗಿ ಪ್ರಕಟಿಸಿದೆ.

ಕೊಡಗು ಜಿಲ್ಲೆಯಲ್ಲಿ ಉಂಟಾದ ಮಳೆ ಹಾನಿಯಿಂದ ರಕ್ಷಿಸಲಾದ ಸಂತ್ರಸ್ಥರ ಪರಿಹಾರ ಕುರಿತು ಅಧಿಕೃತ ಮಾಹಿತಿ ನೀಡಿರುವ ಜಿಲ್ಲಾಡಳಿತ, ಭಾರಿ ಮಳೆ ಹಾಗೂ ಭೂಕುಸಿತದಲ್ಲಿ ಸಿಲುಕಿಕೊಂಡವರನ್ನು ಗರುಡ ಫೋರ್ಸ್, ಮೌಂಟನೇರಿಂಗ್ ಎನ್‍ಸಿಸಿ ತಂಡ, ಎನ್‍ಡಿಆರ್‍ಎಫ್, ಸಿವಿಲ್ ಡಿಫೆನ್ಸ್, ಭಾರತೀಯ ಸೇನೆ, ಭಾರತೀಯ ನೌಕಾಪಡೆ, ಎಸ್‍ಡಿಆರ್‍ಎಫ್, ರಾಜ್ಯ ಪೊಲೀಸ್ ತಂಡ ಮತ್ತು ಅಗ್ನಿಶಾಮಕ ತಂಡದ ಮೂಲಕ ರಕ್ಷಿಸಿ ಜಿಲ್ಲೆಯಲ್ಲಿ ತೆರೆದಿರುವ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 54 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಪೈಕಿ 14 ಕೇಂದ್ರಗಳ ಸಂತ್ರಸ್ಥರು ಅವರ ಸಂಬಂಧಿಕರ ಮನೆಗಳಿಗೆ ತೆರಳಿರುವುದರಿಂದ ಮುಚ್ಚಲಾಗಿದೆ. ಪ್ರಸಕ್ತ ಮಡಿಕೇರಿ ತಾಲೂಕಿನಲ್ಲಿ 20, ಸೋಮವಾರಪೇಟೆ ತಾಲೂಕಿನಲ್ಲಿ 15 ವೀರಾಜಪೇಟೆ ತಾಲೂಕಿನಲ್ಲಿ 5 ಸೇರಿದಂತೆ 40 ಹಾಗೂ ನೆರೆಯ ದಕ್ಷಿಣ ಕನ್ನಡದ ಅರಂತೋಡು ತೆಕ್ಕಿಲ್ ಹಾಲ್ ಮತ್ತು ಕಲ್ಲುಗುಂಡಿಯಲ್ಲಿ ಎರಡು ಪರಿಹಾರ ಕೇಂದ್ರಗಳು ಸೇರಿದಂತೆ 42 ಪರಿಹಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 5512 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಜಿಲ್ಲೆಯಲ್ಲಿ ಆ.14ರಿಂದ ಗುರುವಾರ ಮಧ್ಯಾಹ್ನದವರೆಗಿನ ಮಾಹಿತಿ ಪ್ರಕಾರ ಭಾರೀ ಮಳೆ ಹಾಗೂ ಭೂ ಕುಸಿತದಿಂದ 9 ಮಂದಿ ಸಾವಿಗೀಡಾಗಿದ್ದು, 9 ಮಂದಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ ಎಂದು ಸ್ಪಷ್ಟಪಡಿಸಿರುವ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಉಸ್ತುವಾರಿ ಸಚಿವರು ಪರಿಹಾರ ಕಾರ್ಯದ ಸಮ್ರಗ ಪರಿಶೀಲನೆ ನಡೆಸಿ ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ಥರಿಗೆ ಯಾವುದೇ ಕೊರತೆ ಉಂಟಾಗದಂತೆ ಪರಿಹಾರ ಸಾಮಾಗ್ರಿಗಳನ್ನು ವಿತರಿಸುವಂತೆ ಸೂಚಿಸಿದ್ದು, ಅದರಂತೆ ಕುಶಾಲನಗರ ಮತ್ತು ಪೊನ್ನಂಪೇಟೆಯಲ್ಲಿ ತಲಾ ಒಂದು ಹಾಗೂ ಮಡಿಕೇರಿಯಲ್ಲಿ ಮೂರು ದಾಸ್ತಾನು ಕೇಂದ್ರಗಳನ್ನು ತೆರದು ಸಾರ್ವಜನಿಕರು, ಸಂಘಸಂಸ್ಥೆಗಳಿಂದ ಸ್ವೀಕೃತವಾಗುತ್ತಿರುವ ಪರಿಹಾರ ಸಾಮಾಗ್ರಿಗಳನ್ನು ದಾಸ್ತಾನು ಮಾಡಿ ಬಳಿಕ ಪರಿಹಾರ ಕೇಂದ್ರಗಳಿಗೆ ವಿತರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಾವಿರಾರು ಮನೆಗಳು ಸಂಪೂರ್ಣವಾಗಿ ಕುಸಿದು ಹೋಗಿದ್ದು, ಭೂ ಕುಸಿತದಿಂದ ಸಾವಿರಾರು ಸಂಖ್ಯೆಯಲ್ಲಿ ನಿವೇಶನ ಮತ್ತು ಮನೆ ರಹಿತರಾಗಿದ್ದು, ಈ ಹಿನ್ನೆಲೆಯಲ್ಲಿ ಮನೆ ಹಾಗೂ ನಿವೇಶನ ಕಳೆದುಕೊಂಡ ಸಂತ್ರಸ್ಥರಿಗೆ ಸರಕಾರದ ವಸತಿ ಯೋಜನೆಯಲ್ಲಿ ಸಂಪೂರ್ಣ ಮನೆ ಕಟ್ಟಲು ಅನುವಾಗುವಂತೆ ಮನೆಗಳನ್ನು ಮಂಜೂರು ಮಾಡಲು ನಿರ್ಧರಿಸಿದ್ದು, ಈ ಸಂಬಂಧ ಸಂತ್ರಸ್ಥರಿಗೆ ನೇರವಾಗಿ ಮನೆಗಳನ್ನು ಮಂಜೂರು ಮಾಡಲು ಕ್ರಮಕೈಗೊಳ್ಳಲಾಗುತ್ತದೆ. ಅಲ್ಲದೆ ತಾತ್ಕಾಲಿಕವಾಗಿ ಪುನರ್ವಸತಿ ಕೇಂದ್ರಗಳನ್ನು ತೆರೆಯಲು ಸರಕಾರಿ ಜಾಗದ ಲಭ್ಯತೆ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ದುರುಪಯೋಗವಾಗಿಲ್ಲ
ಕೊಡಗಿನಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಇದನ್ನು ತಿಳಿದು ಸರ್ಕಾರದ ಜೊತೆಗೆ ಸರ್ಕಾರೇತರ ಸಂಸ್ಥೆಗಳಿಂದ ಆಹಾರ ಹಾಗೂ ಇತರೆ ಸಾಮಾಗ್ರಿಗಳು ಜಿಲ್ಲೆಗೆ ಹರಿದು ಬರುತ್ತಿದೆ. ಈ ಸಂಬಂಧ ನಗರದ ಜಿಲ್ಲಾಡಳಿತ ಭವನ, ಎ.ಪಿ.ಎಂ.ಸಿ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಹಾಗೂ ಕುಶಾಲನಗರದ ಎ.ಪಿ.ಎಂ.ಸಿ ಗಳಲ್ಲಿ ಆಹಾರ ಮತ್ತು ಇತರೆ ಸಾಮಗ್ರಿಗಳನ್ನು ದಾಸ್ತಾನು ಮಾಡಲಾಗುತ್ತಿದೆ. ಈ ದಾಸ್ತಾನು ಮಾಡಿದ ಆಹಾರ ಹಾಗೂ ಇತರೆ ಸಾಮಗ್ರಿಗಳನ್ನು ಪರಿಹಾರ ಕೇಂದ್ರಗಳಿಗೆ ಮತ್ತು ಗ್ರಾಮ ಪಂ. ಮೂಲಕ ಸಂತ್ರಸ್ಥರಿಗೆ ಪೂರೈಕೆ ಮಾಡಲಾಗುತ್ತಿದೆ.

ಆದರೆ, ಕೆಲವು ಸಾಮಾಜಿಕ ಜಾಲ ತಾಣಗಳಲ್ಲಿ ಜಿಲ್ಲಾಡಳಿತಕ್ಕೆ ಪೂರೈಕೆಯಾಗುವ ಆಹಾರ ಹಾಗೂ ಇತರೆ ಸಾಮಗ್ರಿಗಳನ್ನು ದುರುಪಯೋಗ ಮಾಡಲಾಗುತ್ತಿದೆ ಎಂಬ ವದಂತಿಯನ್ನು ಹರಿಬಿಡುತ್ತಿದ್ದು, ಇದು ಸತ್ಯಕ್ಕೆ ದೂರವಾದುದಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇಂತಹ ವದಂತಿಗಳನ್ನು ಹಾಕುವವರ ವಿರುದ್ಧ ಕ್ರಮಕೈಗೊಳ್ಳಲು ಈಗಾಗಲೇ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News