ಅತಿವೃಷ್ಟಿ, ಬರ ಪರಿಸ್ಥಿತಿ: ಸಿಎಂ ಅಧ್ಯಕ್ಷತೆಯಲ್ಲಿ ಆ.24 ರಂದು ಸಚಿವ ಸಂಪುಟ ಸಭೆ

Update: 2018-08-23 15:41 GMT

ಬೆಂಗಳೂರು, ಆ. 23: ಮಳೆ, ಪ್ರವಾಹ, ಗುಡ್ಡ ಕುಸಿತದಿಂದ ನಿರಾಶ್ರಿತರಾಗಿರುವ ಕೊಡಗು ಜಿಲ್ಲೆ ಜನರಿಗೆ ಪುನರ್ವಸತಿ ಕಲ್ಪಿಸುವುದು ಹಾಗೂ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಗಳಿಗೆ ಪರಿಹಾರ ಒದಗಿಸಲು ನಾಳೆ(ಆ.24) ಸಿಎಂ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ.

ನಾಳೆ ಸಂಜೆ 4 ಗಂಟೆಗೆ ವಿಧಾನಸೌಧದ ಮೂರನೆ ಮಹಡಿಯಲ್ಲಿನ ಸಚಿವ ಸಂಪುಟ ಸಭಾಂಗಣದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಕೊಡಗು, ಕರಾವಳಿ ಮಲೆನಾಡಿನಲ್ಲಿ ಸತತ ಮಳೆ, ಪ್ರವಾಹದಿಂದ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ಹಲವು ಗ್ರಾಮಗಳು ಸಂಪರ್ಕ ಕಡಿತಗೊಂಡಿವೆ.

ಜತೆಗೆ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ಮನೆ-ಆಸ್ತಿ ಕಳೆದುಕೊಂಡಿದ್ದಾರೆ. ರಸ್ತೆಗಳ ಪುನರ್ ನಿರ್ಮಾಣ, ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಸರಕಾರ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಹಾಗೂ ಹಣಕಾಸಿನ ಹೊಂದಾಣಿಕೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಗಳಿವೆ.

ಬರ: ಬೀದರ್, ಕಲಬುರ್ಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಗದಗ, ವಿಜಯಪುರ ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತೀವ್ರ ಸ್ವರೂಪದ ಮಳೆ ಕೊರತೆ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯವೇ ನಡೆದಿಲ್ಲ. ಕೆಲವು ಕಡೆ ಬಿತ್ತನೆಯಾಗಿದ್ದು ಮಳೆ ಕೊರತೆಯಿಂದ ಹಾನಿಗೀಡಾಗಿದೆ. ಹೀಗಾಗಿ ಮೇಲ್ಕಂಡ ಜಿಲ್ಲೆಗಳಲ್ಲಿನ ವಾಸ್ತವ ಪರಿಸ್ಥಿತಿ ಅಧ್ಯಯನ ನಡೆಸಿ ಬರ ಪೀಡಿತ ಜಿಲ್ಲೆಗಳ ಘೋಷಣೆ ಹಾಗೂ ಆ ಪ್ರದೇಶದ ಜನರಿಗೆ ಕುಡಿಯುವ ನೀರು, ಉದ್ಯೋಗ ದೊರಕಿಸಿಕೊಡುವ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News