ಧಾರವಾಡ: 84ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಆರಂಭ
ಬೆಂಗಳೂರು, ಆ.23: ಧಾರವಾಡದಲ್ಲಿ ನಡೆಯಲಿರುವ 84ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರವಾಗಿ ಈಗಾಗಲೇ ಒಂದು ಸಭೆಯನ್ನು ನಡೆಸಲಾಗಿದೆ ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ್ ಮಾಹಿತಿ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ದಿನದ ಹಿಂದೆ 84ನೇ ಸಾಹಿತ್ಯ ಸಮ್ಮೇಳನ ಕುರಿತಂತೆ ಸಭೆ ನಡೆಸಲಾಗಿದೆ. ಸಮ್ಮೇಳನದ ದಿನಾಂಕ, ಸ್ಥಳ ಹಾಗೂ ಅಧ್ಯಕ್ಷರ ಆಯ್ಕೆ ಕುರಿತು ಚರ್ಚೆ ನಡೆಸಲಾಗಿದೆ. ಈ ಸಭೆಯಲ್ಲಿ 340 ಮುಖಂಡರು ಸೇರಿದ್ದರು ಎಂದರು.
ಮುಂದಿನ ನವೆಂಬರ್ ಇಲ್ಲವೆ ಡಿಸೆಂಬರ್‌ನಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಿದ್ದು, ಉತ್ತರ ಕರ್ನಾಟಕ ಅಥವಾ ಧಾರವಾಡದವರನ್ನೇ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಎಂಬ ಸಲಹೆ ಕೇಳಿ ಬಂದಿವೆ, ಧಾರವಾಡದ ಕರ್ನಾಟಕ ಕಾಲೇಜ್ ಮೈದಾನದಲ್ಲಿ ಮಾಡಿ ಎಂಬ ಸಲಹೆಯೂ ಬಂದಿದೆ ಎಂದರು.
ಈಗಾಗಲೇ ಸಮ್ಮೇಳನದ ಅಧ್ಯಕ್ಷರ ಕುರಿತಂತೆ 10 ಹೆಸರು ಪ್ರಸ್ತಾಪವಾಗಿದೆ. ಹಿರಿಯ ಸಾಹಿತಿಗಳಾದ ಡಾ.ಚಂದ್ರಶೇಖರ್ ಕಂಬಾರ, ವೀಣಾ ಶಾಂತೇಶ್ವರ್, ಡಾ. ಪಂಚಾಕ್ಷರಿ ಹಿರೇಮಠ್, ಡಾ.ಜಿ.ಸ್.ಅಮೂರ್, ಎಚ್.ಎಸ್.ವೆಂಕಟೇಶ್ ಮೂರ್ತಿ, ಗೊ.ರು.ಚನ್ನಬಸಪ್ಪ ಸೇರಿದಂತೆ ಹಲವರ ಹೆಸರು ಪ್ರಸ್ತಾಪವಾಗಿದೆ ಎಂದು ತಿಳಿಸಿದರು.