ಚಿಕ್ಕಮಗಳೂರು: ಮಳೆ ಕ್ಷೀಣಿಸಿದರೂ ನಿಲ್ಲದ ಭೂ ಕುಸಿತ
ಚಿಕ್ಕಮಗಳೂರು, ಆ.23: ಜಿಲ್ಲಾದ್ಯಂತ ಕಳೆದ ಒಂದು ತಿಂಗಳಿಂದ ಸತತವಾಗಿ ಸುರಿದ ಮಳೆ ಕಳೆದ ನಾಲ್ಕು ದಿನಗಳಿಂದ ಬಿಡುವು ನೀಡಿದ್ದರೂ ಸಹ ಜಿಲ್ಲೆಯ ಮಲೆನಾಡಿನ ಅಲ್ಲಲ್ಲಿ ಹಲವೆಡೆ ಭೂ ಕುಸಿತ ಸಾಮಾನ್ಯವಾಗಿದೆ.
ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಭಾಗದಲ್ಲಿ ಮಳೆ ಕಡಿಮೆಯಾಗಿದ್ದು, ತುಂಬಿ ಹರಿಯುತ್ತಿದ್ದ ತುಂಗಾ, ಭದ್ರಾ, ಹೇಮಾವತಿ ನೀರಿನ ಮಟ್ಟ ಗಣನೀಯ ಇಳಿಕೆ ಕಂಡಿದೆ. ಬುಧವಾರ ಜಿಲ್ಲಾದ್ಯಂತ ಮಳೆ ಕಡಿಮೆಯಿದ್ದು, ಮೋಡ ಮುಸುಕಿದ ವಾತಾವರಣವಿತ್ತು. ಆದರೆ ಬುಧವಾರ ರಾತ್ರಿ ವೇಳೆ ಮಲೆನಾಡಿನ ಅಲ್ಲಲ್ಲಿ ಭಾರೀ ಮಳೆಯಾಗಿದೆ. ಗುರುವಾರ ಬೆಳಗಿನಿಂದ ಸಂಜೆ ವರೆಗೆ ಮಳೆ ಬಿಡುವು ನೀಡಿದ್ದು, ಸಂಜೆಯಾಗುತ್ತಲೇ ಸಾಧಾರಣ ಮಳೆ ಸುರಿದಿದೆ.
ಮಲೆನಾಡು ಭಾಗದಲ್ಲಿ ಹಲವೆಡೆ ರಸ್ತೆಗಳು ಬಿರುಕು ಬಿಟ್ಟಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗಿರುವ ಪ್ರಕರಣಗಳು ಗುರುವಾರ ನಡೆದಿವೆ. ಜಿಲ್ಲೆಯ ಕೊಪ್ಪ ತಾಲೂಕಿನ ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹೊಸಕೊಪ್ಪ ಗ್ರಾಮದ ಸಮೀಪ ಸುಮಾರು ನೂರು ಮೀಟರ್ ನಷ್ಟು ರಸ್ತೆ ಕುಸಿತ ಉಂಟಾಗಿರುವುದರಿಂದ ಈ ಮಾರ್ಗದಲ್ಲಿ ವಾಹನ ಸವಾರರು ಭೀತಿಯಿಂದಲೇ ಸಂಚರಿಸುವಂತಾಗಿದೆ.
ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಬಳಿಯ ಬಿದರೆ ಗ್ರಾಮದ ಸತೀಶ್ ಭಟ್ ಎಂಬವರಿಗೆ ಸೇರಿದ ಅಡಿಕೆ ತೋಟದಲ್ಲಿ ಬುಧವಾರ 20 ಅಡಿ ಆಳ ಭೂ ಕುಸಿತ ಉಂಟಾಗಿದೆ. ಒಂದು ಎಕರೆ ಪ್ರದೇಶದಲ್ಲಿ ಅಡಿಕೆ, ಕಾಫಿ ಮತ್ತು ಕಾಳುಮೆಣಸು ಬೆಳೆ ನಾಶವಾಗಿದೆ ಎಂದು ತಿಳಿದು ಬಂದಿದೆ. ತಮ್ಮ ತೋಟದಲ್ಲಿ ಭೂ ಕುಸಿತ ಉಂಟಾಗಿದ್ದರಿಂದ ರೈತ ಸತೀಶ್‍ಭಟ್ ಆಂತಕಕ್ಕೆ ಒಳಗಾಗಿದ್ದಾರೆ. ತಾಲೂಕಿನ ಬೊಗಸೆ ವಡ್ಡಿ ಗ್ರಾಮದ ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದು ಸಂಪರ್ಕ ಬಂದ್ ಆಗಿದೆ. ರಸ್ತೆಯ ಒಂದು ಬದಿ ಸಂಪೂರ್ಣ ಕುಸಿದ್ದಿದ್ದು, ರಸ್ತೆ ಸಂಪರ್ಕವಿಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ. ಗ್ರಾಮಕ್ಕೆ ಯಾವುದೇ ವಾಹನ ಸಂಚರಿಸಲು ಸಾಧ್ಯವಾಗದೆ ಗ್ರಾಮಸ್ಥರು ಕಾಲುನಡಿಗೆಯಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ.
ಎನ್.ಆರ್.ಪುರ ತಾಲೂಕಿನ ಮೇಲ್ಪಾಲ್ ಗ್ರಾಮದ ಹಳಸೆ ಶಿವಣ್ಣ ಎಂಬವರ ಕಾಫಿತೋಟದಲ್ಲೂ ಬುಧವಾರ ಗುಡ್ಡ ಕುಸಿದ ಪರಿಣಾಮ ಕಾಫಿ ಬೆಳೆಗೆ ಹಾನಿಯಾಗಿದೆ. ಹಳಸೆ ಶಿವಣ್ಣ ರವರು ತಮ್ಮ ಜಮೀನಿನಲ್ಲಿ ಬೆಳೆದಿರುವ ಕಾಫಿ, ಕಾಳು ಮೆಣಸು ಬೆಳೆಯೂ ಒಂದು ಎಕರೆ ಪ್ರದೇಶದಷ್ಟು ಗುಡ್ಡ ಕುಸಿತದಿಂದ ಹಾನಿಯಾಗಿದೆ ಎಂದು ವರದಿಯಾಗಿದೆ. ಬೆಳೆಹಾನಿಯಿಂದ ಶಿವಣ್ಣರವರು ಕಂಗಲಾಗಿದ್ದಾರೆ.
ಮಲೆನಾಡಿನ ಅಲ್ಲಲ್ಲಿ ಗುಡ್ಡ ಕುಸಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದ್ದು, ಒಂದು ಕಡೆಯಾದರೆ ಸತತ ಮಳೆಗೆ ಮನೆಗಳಿಗೂ ಹಾನಿಯಾಗುತ್ತಿರುವುದರಿಂದ ಜನರು ಭಯದಲ್ಲಿ ಜೀವನ ನಡೆಸುವಂತಾಗಿದೆ. ನಿರಂತರ ಮಳೆಯಿಂದ ಅಡಿಕೆ, ಕಾಫಿ, ಕಾಳು ಮೆಣಸು ಬೆಳೆಗಳು ಕೊಳೆ ರೋಗಕ್ಕೆ ತುತ್ತಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ರೈತರನ್ನು ಚಿಂತಿತರನ್ನಾಗಿ ಮಾಡಿದೆ. ಒಂದೆಡೆ ಅಲ್ಲಲ್ಲಿ ಗುಡ್ಡ ಕುಸಿತದಿಂದ ಕಾಫಿ, ಅಡಿಕೆ, ಕಾಳುಮೆಣಸು ಬೆಳೆಹಾನಿ ಸಂಭವಿಸುತ್ತಿದ್ದು, ಮತ್ತೊಂದು ಕಡೆ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ನಷ್ಟ ಉಂಟಾಗುತ್ತಿದೆ. ಇದರಿಂದ ರೈತರ ಪಾಡು ಗಾಯದ ಮೇಲೆ ಬರೆ ಎಳೆದಂತಾಗಿದೆ ಸರಕಾರ ಕೂಡಲೇ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕೆಂದು ರೈತ ಸಂಘಟನೆಗಳು ಒತ್ತಾಯಿಸಿವೆ.