ಚಿಕ್ಕಮಗಳೂರು: ಶಾಸಕರಿಂದ ಉಚಿತ ರಸಗೊಬ್ಬರ ವಿತರಣೆ
ಚಿಕ್ಕಮಗಳೂರು, ಆ.23: ರೈತರನ್ನು ಆರ್ಥಿಕವಾಗಿ ಸೃಢಗೊಳಿಸುವ ಉದ್ದೇಶದಿಂದ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗ ಪಡೆದುಕೊಂಡು ರೈತರು ಆರ್ಥಿಕ ಸ್ವಾಲಂಭಿಗಳಾಗುವಂತೆ ಶಾಸಕ ಸಿ.ಟಿ.ರವಿ. ಕರೆ ನೀಡಿದರು.
ಗುರುವಾರ ನಗರದ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ನೀಡುವ ಉಚಿತ ರಸಗೊಬ್ಬರಗಳನ್ನು ವಿತರಿಸಿ ಮಾತನಾಡಿದ ಅವರು, ಕೃಷಿಕೇಂದ್ರದಲ್ಲಿ ತಾಂತ್ರಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಬೇಸಾಯ ಮಾಡಿದ್ದೇ ಆದರೆ ಹೆಚ್ಚಿನ ಆಧಾಯ ಪಡೆಯಬಹುದು. ಭೂಮಿ ತಾಯಿ ಎಂದಿಗೂ ರೈತರನ್ನು ಹಾಳಾಗಲು ಬಿಡುವುದಿಲ್ಲ, ಕೃಷಿಯಲ್ಲಿ ಆಸಕ್ತಿ ವಹಿಸಿ ಮಾರುಕಟ್ಟೆ ಅಧ್ಯಯನ ಮಾಡಿ ಕೃಷಿ ಮಾಡಿದ್ದೇ ಆದರೆ ಉತ್ತಮ ಲಾಭ ಪಡೆಯಬಹುದು ಎಂದರು.
ತಾಲೂಕು ಪಂ. ಅಧ್ಯಕ್ಷ ಜಯಣ್ಣ ಮಾತನಾಡಿ, ಎಸ್.ಸಿ., ಎಸ್.ಟಿ ರೈತರಿಗೆ ಪ್ರತಿವರ್ಷ ತಾಲೂಕು ಪಂ. ನಿಂದ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅದರೆ ಇಲಾಖೆ ವತಿಯಿಂದ ನೀಡುತ್ತಿರುವುದರಿಂದ ಅದು ಸಾರ್ವಜನಿಕರಿಗೆ ಗೊತ್ತಾಗುತ್ತಿರಲ್ಲಿಲ್ಲ. ಆದ್ದರಿಂದ ತಾಲೂಕು ಪಂ. ಆವರಣದಲ್ಲಿ ಫಲಾನುಭವಿಗಳಿಗೆ ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
60ಕ್ಕೂ ಹೆಚ್ಚು ಫಲಾನುಭವಿಗಳಿಗೆ ಉಚಿತ ರಸಗೊಬ್ಬರ ವಿತರಿಸಲಾಯಿತು. ತಾ.ಪಂ.ಉಪಾಧ್ಯಕ್ಷ ರಮೇಶ್, ಜಿಲ್ಲಾ ಪಂ. ಸದಸ್ಯೆ ಜಸಂತಾ ಅನಿಲ್ ಕುಮಾರ್, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಭವ್ಯ ನಟೇಶ್, ಇಒ ಸಿದ್ದಪ್ಪ ಇದ್ದರು.