ಮಲೆನಾಡು ಅತೀವೃಷ್ಟಿ: ಸೂಕ್ತ ಪರಿಹಾರ ನೀಡಲು ರಾಜ್ಯ ಸರಕಾರಕ್ಕೆ ಸಿ.ಟಿ.ರವಿ ಒತ್ತಾಯ

Update: 2018-08-23 17:52 GMT

ಚಿಕ್ಕಮಗಳೂರು, ಆ.23: ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಿಂದ ಕಾಫಿ, ಕಾಳುಮೆಣಸು, ಭತ್ತ ಸೇರಿದಂತೆ ವಾಣಿಜ್ಯ ಬೆಳೆಗಳು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ರಾಜ್ಯ ಸರಕಾರವನ್ನು ಶಾಸಕ ಸಿ.ಟಿ.ರವಿ ಒತ್ತಾಯಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದ ಅನೇಕ ರಸ್ತೆಗಳು, ಮೋರಿಗಳು, ಸೇತುವೆಗಳಿಗೆ ಹಾನಿಯುಂಟಾಗಿ ಸಂಪರ್ಕ ಕಡಿದುಕೊಂಡಿವೆ. ಅವುಗಳ ಪುನರ್ ನಿರ್ಮಾಣ ಕಾರ್ಯಕ್ಕೆ ಹಣ ಬಿಡುಗಡೆಗೊಳಿಸಬೇಕು. ಈ ಬಾರಿ ಎಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದ್ದು, ವೈಜ್ಞಾನಿಕ ಅಧ್ಯಯನ ನಡೆಸಬೇಕು, ಪಶ್ಚಿಮಘಟ್ಟ ಪ್ರದೇಶದಲ್ಲಿ ಕೃಷಿ ಬಿಟ್ಟು ವಾಣಿಜ್ಯ ಬೆಳೆಗಳ ಉದ್ದೇಶಕ್ಕೆ ಭೂಪರಿವರ್ತನೆ ಮಾಡುವುದನ್ನು ಸ್ಥಗಿತಗೊಳಿಸಬೇಕು, ಅವೈಜ್ಞಾನಿಕ ರೆಸಾರ್ಟ್, ಹೋಂಸ್ಟೇಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕೆಂದು ತಿಳಿಸಿದರು.

ಕೇಂದ್ರ ಸರಕಾರ ಸಿಆರ್‍ಎಫ್ ನಿಧಿಯಲ್ಲಿ ರಾಜ್ಯ 4,008 ಕೋಟಿ ರೂ. ನೀಡಿದೆ. ಅದರಲ್ಲಿ ಚಿಕ್ಕಮಗಳೂರಿಗೆ 103 ಕೋಟಿ ರೂ. ನೀಡಲಾಗಿದೆ. ರಾಜ್ಯ ಸರಕಾರ ಟೆಂಡರ್ ಕರೆದಿಲ್ಲ, ಕೇಂದ್ರದಿಂದ ನೀಡಲಾಗಿದೆ. ಹಣ ಬಿಡುಗಡೆಗೆ ಸಮಯ ತಗೆದುಕೊಳ್ಳುತ್ತದೆ ಎಂದು ಕಾರಣ ಹೇಳುತ್ತಿದೆ ಎಂದು ಆರೋಪಿಸಿದರು.

ಖಾಸಗಿ ಸಹಭಾಗಿತ್ವದಲ್ಲಿ ಕೃಷಿ ನಿರ್ವಹಣೆಗೆ ಕೇಂದ್ರ ಚಿಂತನೆ:
ದೇಶದ ಕೃಷಿ ವಲಯವನ್ನು ಒಂದು ಘಟಕವಾಗಿ ಪರಿವರ್ತಿಸಿ ಖಾಸಗಿ ಸಹಭಾಗಿತ್ವದಲ್ಲಿ ಕೃಷಿ ನಿರ್ವಹಣೆ ಮಾಡಲು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಸಾರ್ವಜನಿಕರು ಮತ್ತು ತಜ್ಞರೊಂದಿಗೆ ಚರ್ಚೆ ಬಳಿಕ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

ಕೃಷಿ ಕೇತ್ರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡುವುದರಿಂದ ರೈತರಿಗೆ ಉಂಟಾಗುವ ನಷ್ಟವನ್ನು ತಪ್ಪಿಸಬಹುದಾಗಿದೆ. ದೇಶದ ಬೇಡಿಕೆ ಮತ್ತು ಪೂರೈಕೆ ಗಮನದಲ್ಲಿಟ್ಟುಕೊಂಡು ಬೆಳೆ ಬೆಳೆಯುತ್ತಾರೆ. ರೈತರ ಭೂಮಿಗೆ ಇಂತಿಷ್ಟು ಬೆಲೆ ನಿಗದಿ ಮಾಡುತ್ತಾರೆ. ಈಗಿನಂತೆ ಎಲ್ಲರೂ ಒಂದೇ ಬೆಳೆ ಬೆಳೆದು ನಷ್ಟ ಅನುಭವಿಸುವುದು ತಪ್ಪುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News