ವಾಜಪೇಯಿ ಗುಣ, ಸಾಧನೆ ವರ್ಣಿಸಲು ಅಸಾಧ್ಯ: ಯಡಿಯೂರಪ್ಪ

Update: 2018-08-23 18:18 GMT

ಶ್ರೀರಂಗಪಟ್ಟಣ, ಆ.23: ಮಾಜಿ ಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಚಿತಾಭಸ್ಮವನ್ನು ಇಲ್ಲಿನ ಪಶ್ಚಿಮವಾಹಿನಿಯ ಬಳಿಯ ಕಾವೇರಿ ನದಿಯಲ್ಲಿ ಗುರುವಾರ ವಿಸರ್ಜಿಸಲಾಯಿತು.

ಮಂಡ್ಯ ಜಿಲ್ಲೆಯ ಗಡಿಭಾಗ ನಿಡಘಟ್ಟದಿಂದ ಪಶ್ವಿಮವಾಹಿನಿವರೆಗೆ ಮೆರವಣಿಗೆ ಮೂಲಕ ಚಿತಾಭಸ್ಮ ತಂದು ಕಾವೇರಿ ನದಿ ದಂಡೆಯ ಮೇಲೆ ಅರ್ಚಕ ಡಾ.ಭಾನುಪ್ರಕಾಶ್ ನೇತೃತ್ವದಲ್ಲಿ ಶ್ರದ್ಧಾ ಕಾರ್ಯದ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಶ್ರಾದ್ಧಾ ಕಾರ್ಯದ ಪೂಜಾ ವಿಧಿವಿಧಾನಗಳು ನಡೆದ ನಂತರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಳಸದಲ್ಲಿದ್ದ ವಾಜಪೇಯಿ ಅವರ ಚಿತಾಭಸ್ಮವನ್ನು ಕಾವೇರಿ ನದಿಗೆ ವಿಸರ್ಜಿಸಿ ಅಂತಿಮ ನಮನ ಸಲ್ಲಿಸಿದರು. 

ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಕೇಂದ್ರ ಸಚಿವ ಅನಂತ್‍ಕುಮಾರ್, ಸಂಸದರಾದ ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಸೇರಿದಂತೆ ಜಿಲ್ಲೆ ಮತ್ತು ಸ್ಥಳೀಯ ಮುಖಂಡರು ಯಡಿಯೂರಪ್ಪ ಅವರ ಜತೆ ಅಸ್ಥಿ ವಿಸರ್ಜನೆ ವೇಳೆ ಕೈಜೋಡಿಸಿದರು. ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ವಾಜಪೇಯಿ ಅವರ ಚಿತಾಭಸ್ಮವನ್ನು ದೇಶದ ಎಲ್ಲಾ ರಾಜ್ಯಗಳ ಪವಿತ್ರ ನದಿಯಲ್ಲಿ ವಿಸರ್ಜಿಸಲು ಪ್ರಧಾನಿ ನರೇಂದ್ರಮೋದಿ ಅವರು  ಸೂಚಿಸಿದ್ದು, ಅದರಂತೆ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು ಎಂದರು.

ವಾಜಪೇಯಿ ಅವರ ಗುಣ ಸಾಧನೆಗಳನ್ನು ಶಬ್ಧಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅವರೊಬ್ಬ ಅಜಾತಶತ್ರು. ದೇಶದ ಎಲ್ಲಾ ಜನರನ್ನು ಒಗ್ಗೂಡಿಸಿಕೊಂಡು ಮುನ್ನಡೆದರು. ಅವರನ್ನು ಕಳೆದುಕೊಂಡು ದೇಶ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಸ್ಮರಿಸಿದರು.

ಬಿಜೆಪಿ ಮುಖಂಡರಾದ ಕೆ.ಎಸ್.ನಂಜುಂಡೇಗೌಡ, ಕೆ.ಬಲರಾಂ, ಎ.ಸಿ.ಪ್ರಕಾಶ್, ಕುಬೇರ್ ಸಿಂಗ್, ಉಮೇಶ್, ಮಲ್ಲೆಗೌಡನಕೊಪ್ಪಲು ನಾಗರಾಜು, ಪರಿಸರ ಪ್ರೇಮಿ ರಮೇಶ್, ಟಿ ಶ್ರೀಧರ್, ಸಂತೋಷ್, ಅರ್ಚಕ ಲಕ್ಷ್ಮೀಶ್ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News