ಮೈಸೂರು: ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಣೆ

Update: 2018-08-23 18:23 GMT

ಮೈಸೂರು,ಆ.23: ಮೈಸೂರಿನಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಈದ್ಗಾ ಮೈದಾನದಲ್ಲಿ ಮಕ್ಕಳು, ಮೊಮ್ಮಕ್ಕಳು, ಸ್ನೇಹಿತರು, ಸಂಬಂಧಿಕರೊಂದಿಗೆ ಜಮಾಯಿಸಿದ ಸಹಸ್ರಾರು ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರಲ್ಲದೆ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಗರದ ತಿಲಕ್ ನಗರ, ಉದಯಗಿರಿ, ಮಹದೇವಪುರ, ರಾಜೀವ್ ನಗರ, ಗೌಸಿಯಾನಗರಗಳಲ್ಲಿಯೂ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಒಬ್ಬರನ್ನೊಬ್ಬರು ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.

ತಿಲಕ್ ನಗರದ ಈದ್ಗಾ ಮೈದಾನದಲ್ಲಿ ಧರ್ಮಗುರು ಖಾಝಿ ಹಝ್ರತ್ ಮೌಲಾನಾ ಮಹಮ್ಮದ್ ಉಸ್ಮಾನ್ ಶರೀಫ್ ಅವರ ನೇತೃತ್ವದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಶ್ವೇತ ವಸ್ತ್ರಧಾರಿಗಳಾಗಿದ್ದ ಸಹಸ್ರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವಿವಿಧ ಪ್ರಾರ್ಥನಾ ಮಂದಿರಗಳ ಉಲಮಾಗಳು, ಮುಖಂಡರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ಕೇರಳ-ಕೊಡಗಿನಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ನಲುಗಿದ ಸಂತ್ರಸ್ತರ ಜೀವನ ಪುನಃ ಮೊದಲಿನಂತೆ ಸರಿ ಹೋಗಲೆಂದು ಇದೇ ವೇಳೆ ಪ್ರಾರ್ಥಿಸಿದರಲ್ಲದೇ, ಅವರ ನೆರವಿಗಾಗಿ ಧನ ಸಂಗ್ರಹಿಸಿದರು. ಇದೇ ವೇಳೆ ನಂಜನಗೂಡಿನಲ್ಲಿಯೂ ಮುಸ್ಲಿಂ ಬಾಂದವರು ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News