ಬಾಂಗ್ಲಾದೇಶದ ಪ್ರಯತ್ನದಿಂದ ರೋಹಿಂಗ್ಯಾ ಶಿಬಿರಗಳಲ್ಲಿ ಕಾಯಿಲೆಗಳ ಹಬ್ಬುವಿಕೆಗೆ ಕಡಿವಾಣ: ಡಬ್ಲ್ಯುಎಚ್‌ಒ

Update: 2018-08-24 14:34 GMT

ಹೊಸದಿಲ್ಲಿ,ಆ.24: ಕಳೆದೊಂದು ವರ್ಷದಲ್ಲಿ ಬಾಂಗ್ಲಾದೇಶ ಸರಕಾರ,ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಮತ್ತು ಸಹಭಾಗಿ ಸಂಸ್ಥೆಗಳ ಪ್ರಯತ್ನಗಳಿಂದಾಗಿ ಸುಮಾರು 10 ಲಕ್ಷ ರೊಹಿಂಗ್ಯಾ ನಿರಾಶ್ರಿತರಲ್ಲಿ ಮಾರಣಾಂತಿಕ ಕಾಯಿಲೆಗಳು ಹಬ್ಬುವುದನ್ನು ತಡೆಯಲಾಗಿದ್ದು,ಸಾವಿರಾರು ಜೀವಗಳನ್ನು ರಕ್ಷಿಸಲಾಗಿದೆ ಎಂದು ಡಬ್ಲ್ಯುಎಚ್‌ಒ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಪೂನಂ ಖೇತ್ರಪಾಲ ಸಿಂಗ್ ಅವರು ಶುಕ್ರವಾರ ಇಲ್ಲಿ ತಿಳಿಸಿದರು.

ಆದಾಗ್ಯೂ ರೊಹಿಂಗ್ಯಾ ನಿರಾಶ್ರಿತರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು, ಹಣಕಾಸಿನ ತೀವ್ರ ಕೊರತೆಯಿಂದಾಗಿ ಅವರ ಶಿಬಿರಗಳಲ್ಲಿ ನಿರಂತರ ಆರೋಗ್ಯ ಸೇವೆಗಳಿಗೆ ಬಾಧೆಯುಂಟಾಗುತ್ತಿದೆ ಎಂದು ಅವರು ಹೇಳಿದರು.

ಕಳೆದೊಂದು ವರ್ಷದಲ್ಲಿ ಅತ್ಯಂತ ಕಠಿಣ ಸವಾಲುಗಳ ನಡುವೆಯೇ ರೋಹಿಂಗ್ಯಾಗಳ ಆರೋಗ್ಯರಕ್ಷಣೆಗಾಗಿ ಅಭೂತಪೂರ್ವ ಪ್ರಯತ್ನಗಳು ನಡೆದಿವೆ. ಆರೋಗ್ಯ ಸೇವೆಗಳನ್ನು ಹೆಚ್ಚಿಸುವ ಮತ್ತು ಸಮೂಹ ಲಸಿಕೆ ಅಭಿಯಾನಗಳ ಮೂಲಕ ಕಾಲರಾ,ದಡಾರ ಮತ್ತು ಡಿಫ್ತೀರಿಯಾದಂತಹ ಕಾಯಿಲೆಗಳ ಹರಡುವಿಕೆಯನ್ನು ತ್ವರಿತವಾಗಿ ತಡೆಗಟ್ಟಲಾಗಿದೆ. ಇಷ್ಟೊಂದು ಬೃಹತ್ ತುರ್ತು ಸನ್ನಿವೇಶದಲ್ಲಿ ರೊಹಿಂಗ್ಯಾಗಳಲ್ಲಿ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆ ಸಾವುಗಳು ಸಂಭವಿಸಿರುವುದು ಗಮನಾರ್ಹವಾಗಿದೆ ಮತ್ತು ಕಳೆದ ಆರು ತಿಂಗಳಲ್ಲಿ ಇಂತಹ ಸಾವುಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದ ಅವರು,ಈ ನಿಟ್ಟಿನಲ್ಲಿ ಬಾಂಗ್ಲಾದೇಶ ಸರಕಾರದ ಪ್ರಯತ್ನಗಳನ್ನು ಪ್ರಶಂಸಿಸಿದರು.

ಡಬ್ಲ್ಯುಎಚ್‌ಒ,ಬಾಂಗ್ಲಾದೇಶದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಸುಮಾರು 107 ಸಂಸ್ಥೆಗಳ ಸಹಭಾಗಿತ್ವದೊಂದಿಗೆ ರೊಹಿಂಗ್ಯಾ ಶಿಬಿರಗಳಲ್ಲಿ ಸಾಕಷ್ಟು ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ ಇವೆಲ್ಲ ಪ್ರಯತ್ನಗಳ ಹೊರತಾಗಿಯೂ ಸವಾಲುಗಳು ಉಳಿದುಕೊಂಡಿವೆ. ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹಗಳು ಮತ್ತು ಭೂಕುಸಿತಗಳು ಉಂಟಾಗುತ್ತಿದ್ದು,ಇದು ಜನರನ್ನು ನಿರ್ವಸಿತಗೊಳಿಸುತ್ತಿರುವ ಜೊತೆಗೆ ಆರೋಗ್ಯ ಕೇಂದ್ರಗಳ ಕಾರ್ಯ ನಿರ್ವಹಣೆಗೂ ವ್ಯತ್ಯಯಗಳನ್ನುಂಟು ಮಾಡುತ್ತಿದೆ ಎಂದು ಸಿಂಗ್ ತಿಳಿಸಿದರು.

ರೊಹಿಂಗ್ಯಾಗಳು ಲೈಂಗಿಕ ಮತ್ತು ಸಂತಾನ ಆರೋಗ್ಯ ಸೇವೆ ಗಳನ್ನು ಬಳಸಿಕೊಳ್ಳಲು ಹಿಂಜರಿಯುತ್ತಿದ್ದಾರೆ, ಈಗಲೂ ಶೇ.70ರಷ್ಟು ಹೆರಿಗೆಗಳು ಆರೋಗ್ಯ ಕೇಂದ್ರಗಳ ಹೊರಗೇ ನಡೆಯುತ್ತಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News