ಕೇಂದ್ರ ಸರಕಾರದ ಆಗ್ರಹ ನಿರಾಕರಿಸಿದ ವ್ಯಾಟ್ಸ್ ಆ್ಯಪ್

Update: 2018-08-24 16:42 GMT

ಹೊಸದಿಲ್ಲಿ, ಆ. 24: ಸುಳ್ಳು ಸುದ್ದಿ ಹಾಗೂ ಪ್ರಚೋದನಕಾರಿ ಸಂದೇಶಗಳನ್ನು ನಿಯಂತ್ರಿಸಲು ಅವುಗಳ ಮೂಲ ಪತ್ತೆಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕು ಎಂಬ ಕೇಂದ್ರ ಸರಕಾರದ ಸೂಚನೆ ಅನುಸರಿಸಲು ಸಾಧ್ಯವಿಲ್ಲ ಎಂದು ವ್ಯಾಟ್ಸ್‌ಆ್ಯಪ್ ಹೇಳಿದೆ.

 ಎಲ್ಲ ರೀತಿಯ ಅತಿ ಸೂಕ್ಷ್ಮ ಸಂಭಾಷಣೆಗಳಿಗೆ ಜನರು ವ್ಯಾಟ್ಸ್ ಆ್ಯಪ್ ಬಳಸುತ್ತಿದ್ದಾರೆ ಎಂದು ಒತ್ತಿ ಹೇಳಿರುವ ವ್ಯಾಟ್ಸ್‌ಆ್ಯಪ್, ಸುಳ್ಳು ಮಾಹಿತಿ ಬಗ್ಗೆ ಜನರಲ್ಲಿ ಜಾಗೃತ ಮೂಡಿಸುವಲ್ಲಿ ಗಮನ ಕೇಂದ್ರೀಕರಿಸಲಾಗಿದೆ ಎಂದಿದೆ. ಸುಳ್ಳು ಸುದ್ದಿಗಳಿಂದ ಹೆಚ್ಚುತ್ತಿರುವ ಗುಂಪು ಹತ್ಯೆಯಂತಹ ಬರ್ಬರ ಅಪರಾಧಗಳಿಗೆ ಕಡಿವಾಣ ಹಾಕಲು ಮೂಲ ಸಂದೇಶವನ್ನು ಪತ್ತೆ ಹಚ್ಚುವ ತಂತ್ರಜ್ಞಾನ ರೂಪಿಸುವಂತೆ ಕೇಂದ್ರ ಸರಕಾರ ವ್ಯಾಟ್ಸ್‌ಆ್ಯಪ್‌ಗೆ ಸೂಚಿಸಿತ್ತು. ಸಂದೇಶ ಮೂಲ ಪತ್ತೆ ಹಚ್ಚುವ ತಂತ್ರಜ್ಞಾನ ರೂಪಿಸುವುದರಿಂದ ವ್ಯಾಟ್ಸ್ ಆ್ಯಪ್‌ನ ಖಾಸಗಿತನ ಹಾಗೂ ಆರಂಭದಿಂದ ಅಂತ್ಯ ದವರೆಗೆ ಗೌಪ್ಯತೆ ದುರ್ಬಲವಾಗುತ್ತದೆ. ಇದರಿಂದ ವ್ಯಾಟ್ಸ್ ಆ್ಯಪ್ ದುರ್ಬಳಕೆ ಆಗುವ ಸಾಧ್ಯತೆ ಇದೆ. ಗೌಪ್ಯತೆಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ವ್ಯಾಟ್ಸ್ ಆ್ಯಪ್ ವಕ್ತಾರರು ಹೇಳಿದ್ದಾರೆ.

ಹಿಂಸಾಚಾರ ಹಾಗೂ ಅಪರಾಧ ಉತ್ತೇಜನಕ್ಕೆ ಕಾರಣವಾಗುವ ಕೆಟ್ಟ ಸಂದೇಶಗಳನ್ನು ಸಾಮೂಹಿಕವಾಗಿ ಹರಡುವ ಸಂದರ್ಭ ಸಂದೇಶದ ಮೂಲ ಪತ್ತೆ ಹಚ್ಚುವ ಹಿನ್ನೆಲೆಯಲ್ಲಿ ವ್ಯಾಟ್ಸ್ ಆ್ಯಪ್ ತಾಂತ್ರಿಕ ಆವಿಷ್ಕಾರ ಶೋಧಿಸುವುದನ್ನು ಮುಂದುವರಿಸಬೇಕು ಎಂದು ಮಾಹಿತಿ ತಂತ್ರಜ್ಞಾನ ಇಲಾಖೆ ತಿಳಿಸಿದೆ. ವ್ಯಾಟ್ಸ್ ಆ್ಯಪ್ ಭಾರತೀಯ ಕಾನೂನಿನ ಅನುಸರಿಸುವುದಾಗಿ ದೃಢ ಭರವಸೆ ನೀಡಬೇಕು. ಅಲ್ಲದೆ ವ್ಯಾಪಕ ಜಾಲ ಹೊಂದಿರುವ ಸಮಸ್ಯೆ ಪರಿಹಾರ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News