ಕಳಸ: ಅಲ್ಲಲ್ಲಿ ಭಾರೀ ಸ್ಫೋಟದ ಶಬ್ಧ; ಆತಂಕದಲ್ಲಿ ಗ್ರಾಮಸ್ಥರು

Update: 2018-08-24 16:56 GMT

ಕಳಸ, ಆ.24: ಹೋಬಳಿ ವ್ಯಾಪ್ತಿಯ ಕುದುರೆಮುಖದ ಸೂಜಿಗುಡ್ಡದಲ್ಲಿ ಭಾರೀ ಸ್ಪೋಟದ ಶಬ್ದಗಳು ಕೇಳಿ ಬರುತ್ತಿದ್ದು, ಕೆಲವೆಡೆ ಭೂಕುಸಿತದಂತಹ ಪ್ರಾಕೃತಿಕ ಅವಘಡಗಳು ಉಂಟಾಗಿವೆ ಎಂದು ಈ ಭಾಗದ ಸ್ಥಳೀಯರು ಅಳಲು ತೋಡಿಕೊಂಡಿದ್ದು, ಗ್ರಾಮಸ್ಥರು ಆತಂಕದಲ್ಲಿ ದಿನಕಳೆಯುತ್ತಿದ್ದಾರೆ. 

ಕಳೆದ ಎರಡು ದಿನಗಳಿಂದ ಇಲ್ಲಿಯ ಬೃಹತ್ ಗಾತ್ರದ ಸೂಜಿ ಗುಡ್ಡದಿಂದ ಸ್ಫೋಟದ ಶಬ್ದವು ಕೇಳಿ ಬಂದಿದೆ. ಈ ಶಬ್ದವನ್ನು ನಾವು ಕೇಳಿದ್ದೇವೆ. ಇದಕ್ಕೆ ಪೂರಕವೆಂಬಂತೆ ನೆಲ್ಲಿಬೀಡು ಸಮೀಪದ ಮನೆಯೊಂದರ ಆಸು ಪಾಸಿನಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಅಲ್ಲದೆ ಕಾಫಿ ತೋಟದಲ್ಲಿ ಅಲ್ಲಲ್ಲಿ ಭೂಕುಸಿತಗಳು ಕಂಡು ಬಂದಿವೆ ಎನ್ನುತ್ತಾರೆ ಸ್ಥಳೀಯರು

ಆದರೆ ಸೂಜಿಗುಡ್ಡದ ಕಡೆಯಿಂದ ಶಬ್ದ ಕೇಳಿಬಂದಿರುವುದು ನಿಜವೇ ಅಥವಾ ಕದ್ದು ಶಿಖಾರಿಗೆ ಹೋಗಿ ಅಲ್ಲಿ ಕೋವಿಯಿಂದ ಹೊರ ಬಂದ ಶಬ್ದವೇ ಎಂಬ ಬಗ್ಗೆಯೂ ಸ್ಥಳೀಯರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಭೂಕುಸಿತಗೊಂಡ ಪ್ರದೇಶಕ್ಕೆ ಸ್ಥಳೀಯ ಸಂಸೆ ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಕಾರ್ಯ ನಡೆಸಿದ್ದಾರೆಂದು ತಿಳಿದು ಬಂದಿದೆ.

ಅಲ್ಲದೇ ಹೋಬಳಿಯ ಚನ್ನಡ್ಲು, ತಾರಿಕೊಂಡು ಭಾಗಗಳಲ್ಲಿಯೂ ಭೂಕುಸಿತವಾಗಿದ್ದು, ಈ ಭೂಕುಸಿತಗಳು ಕೊಡಗಿನಲ್ಲಿ ನಡೆದ ಭೂಕುಸಿತದ ರೀತಿಯಲ್ಲಿಯೇ ನಡೆದಿದೆ. ಕೊಡಗಿನಲ್ಲಿ ದೊಡ್ಡ ಮಟ್ಟದಲ್ಲಿ ಭೂ ಕುಸಿತವಾಗಿದ್ದರೇ ಈ ಭಾಗಗಳಲ್ಲಿ ಸಣ್ಣ ಮಟ್ಟದಲ್ಲಿ ಆಗಿದೆ ಎಂದು ಮರಸಣಿಗೆಯ ವಿಶ್ವನಾಥ್ ಹೇಳುತ್ತಾರೆ.

ಸೂಜಿಗುಡ್ಡದ ಕಡೆಯಿಂದ ಶಬ್ದಗಳು ಕೇಳಿ ಬರುತ್ತಿರುವುದು ನಿಜ. ಆದರೆ ಅದು ಯಾವುದರ ಶಬ್ದ ಅನ್ನುವುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಸಂಸೆ ಸಮೀಪದ ಕೆಂಕನಕೊಂಡ ಗ್ರಾಮದ ರಾಮ್ ಪ್ರಕಾಶ್ ಹೇಳಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News