ಡಿಪಿಎಸ್‍ಯುನಿಂದ ಕೊಡಗಿಗೆ 7 ಕೋಟಿ ರೂ. ನೆರವು: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ

Update: 2018-08-24 17:18 GMT

ಮಡಿಕೇರಿ, ಆ.24: ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕಾರ್ಯಗಳನ್ನು ನಡೆಸುವುದಕ್ಕೆ ನೆರವಾಗುವಂತೆ ಡಿಫೆನ್ಸ್ ಪಬ್ಲಿಕ್ ಸೆಕ್ಟರ್ ಅಂಡರ್ ಟೇಕಿಂಗ್ಸ್‍ನ(ಡಿಪಿಎಸ್‍ಯು)ಮೂರು ಸಂಸ್ಥೆಗಳ ಮೂಲಕ ಕೊಡಗು ಜಿಲ್ಲೆಗೆ 7 ಕೋಟಿ ರೂ. ನೆರವನ್ನು ನೀಡುವುದಾಗಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ನೆರವು ಬಿಡುಗಡೆಯನ್ನು ಘೋಷಿಸಿದ ಸಚಿವರು, ಈ ನೆರವನ್ನು ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರ ಪುನರ್ವಸತಿ, ಹಾಳಾದ ರಸ್ತೆ ಸೇರಿದಂತೆ ಇನ್ನಾವುದೇ ಅಗತ್ಯ ಕಾರ್ಯಗಳಿಗೆ ಜಿಲ್ಲಾಡಳಿತ ಬಳಸಿಕೊಳ್ಳಬಹುದೆಂದು ಸ್ಪಷ್ಟಪಡಿಸಿದರು.

ಸಂಸದರ ನಿಧಿಯಿಂದ 1 ಕೋಟಿ ರೂ.
ಕೊಡಗಿನಲ್ಲಿ ಸಂಭವಿಸಿರುವ ಕಂಡು ಕೇಳರಿಯದ ಪ್ರಾಕೃತಿಕ ವಿಕೋಪಗಳ ಹಿನ್ನೆಲೆಯಲ್ಲಿ ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರವೇಶಿಸಿರುವ ತಾನು, ತನ್ನ ಸಂಸದರ ನಿಧಿಯಿಂದ 1 ಕೋಟಿ ರೂ.ಗಳ ನೆರವನ್ನು ಕೊಡಗಿಗೆ ಒದಗಿಸುತ್ತಿದ್ದೇನೆ. ಇದನ್ನು ಸಹ ಜಿಲ್ಲಾಡಳಿತ ತನ್ನ ಅಗತ್ಯಕ್ಕೆ ತಕ್ಕಂತೆ ಪರಿಹಾರ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬಹುದೆಂದು ತಿಳಿಸಿದರು.

ಭಾರೀ ಮಳೆಯಿಂದ ಮಡಿಕೇರಿ, ಸೋಮವಾರಪೇಟೆ ತಾಲ್ಲೂಕಿನ ಸಾಕಷ್ಟು ಗ್ರಾಮಗಳು ಸೇರಿದಂತೆ ಹಲವೆಡೆಗಳಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಅತ್ಯಂತ ಗಂಭೀರ ಸ್ವರೂಪದಲ್ಲಿ ಹಾಳಾಗಿದ್ದು, ಜಿಲ್ಲಾ ಕೇಂದ್ರ್ರ ಕೇವಲ ಮೈಸೂರು ಸಂಪರ್ಕವನ್ನಷ್ಟೆ ಹೊಂದಿದ್ದು, ಇತರೆಡೆಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆಗಳ ಮರು ಸಂಪರ್ಕದ ಕಠಿಣ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ‘ಬಾರ್ಡರ್ ರೋಡ್ ಆರ್ಗನೈಸೇಷನ್’(ಬಿಆರ್‍ಒ)ನ ಇಂದು ತಾಂತ್ರಿಕ ತಂಡವನ್ನು ಕೊಡಗು ಜಿಲ್ಲೆಗೆ ಕಳುಹಿಸಿಕೊಡುತ್ತೇನೆ. ಆ ತಂಡದ ಸಲಹೆ ಸೂಚನೆಗಳನ್ನು, ಮಾರ್ಗದರ್ಶನವನ್ನು ಪಡೆದುಕೊಳ್ಳಬಹುದೆಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಪರಿಹಾರ ಘೋಷಣೆ ಅಂದಾಜಿನ ಬಳಿಕ
ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಂಭವಿಸಿರುವ ಗುಡ್ಡ ಕುಸಿತ ಸೇರಿದಂತೆ ವ್ಯಾಪಕ ಹಾನಿಗೆ ಸಂಬಂಧಿಸಿದಂತೆ ಕೇಂದ್ರದ ನಷ್ಟ ಅಂದಾಜು ತಂಡ ಜಿಲ್ಲೆಗೆ ಆಗಮಿಸಿ, ಆಸ್ತಿ ಪಾಸ್ತಿಗಳ ಕುರಿತಾದ ವಿಸ್ತೃತ ವರದಿಯನ್ನು ಕೇಂದ್ರಕ್ಕೆ ನೀಡಿದ ಬಳಿಕ, ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸುವ ಪ್ರಸ್ತಾವನೆಗಳನ್ನು ಆಧರಿಸಿ ಪರಿಹಾರವನ್ನು ಬಿಡುಗಡೆ ಮಾಡಲಾಗುತ್ತದೆ. ಪ್ರಸ್ತುತ ತಾನು ಇಲ್ಲಿ ಕಂಡಿರುವ ಪ್ರಾಕೃತಿಕ ವಿಕೋಪಗಳ ಬಗ್ಗೆ ಪ್ರಧಾನಿಗಳು, ಗೃಹ ಸಚಿವರಿಗೆ ಮಾಹಿತಿಯನ್ನು ನೀಡುವುದರೊಂದಿಗೆ, ಇಲ್ಲಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿರುವ ವಿಚಾರಗಳನ್ನು ಕೇಂದ್ರದ ಸಚಿವರಾದ ನಿತಿನ್ ಗಡ್ಕರಿ ಅವರ ಗಮನಕ್ಕೆ ತರುವುದಾಗಿ ಹೇಳಿದರು.

ನೆರೆಯ ಕೇರಳದಲ್ಲಿ ಸಂಭವಿಸಿರುವ ಅತಿವೃಷ್ಟಿ ಹಾನಿಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳು ತಕ್ಷಣಕ್ಕೆ ಕೈಗೊಳ್ಳಬೇಕಾದ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ 500 ಕೋಟಿಯನ್ನು ನೀಡಿದ್ದು, ನಷ್ಟದ ಅಂದಾಜಿನ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

504 ಮಂದಿಯ ರಕ್ಷಣೆ
ಭಾರತೀಯ ಸೇನೆ ಕೊಡಗಿನ ಮುಕ್ಕೋಡ್ಲು, ಕಾಲೂರು ವಿಭಾಗದಲ್ಲಿ ಎರಡು ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಿದ್ದು, ವಿವಿಧ ರಕ್ಷಣಾ ಪಡೆಗಳು ಆಗಸ್ಟ್ 18 ರಿಂದ ಇಲ್ಲಿಯವರೆಗೆ ಸಂಕಷ್ಟದಲ್ಲಿ ಸಿಲುಕಿದ್ದ 504 ಮಂದಿಯನ್ನು ರಕ್ಷಿಸಿವೆ. ಇದೇ ಆಗಸ್ಟ್ 20 ರ ಬಳಿಕ ರಾಜ್ಯ ಸರ್ಕಾರದಿಂದ ರಕ್ಷಣಾ ಕಾರ್ಯ ಕೈಗೊಳ್ಳುವ ಬಗ್ಗೆ ಯಾವುದೇ ಮನವಿಗಳು ಬಂದಿಲ್ಲವೆಂದು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.

ಭಾರತೀಯ ವಾಯುಸೇನೆಯ ಎಂಐ-17 ವಿಮಾನದ ಮೂಲಕ 16 ಸುತ್ತುಗಳಲ್ಲಿ 10 ಗಂಟೆಗಳ ನಿರಂತರ ಹಾರಾಟವನ್ನು ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ನಡೆಸಿದೆ. ಪ್ರತಿಕೂಲ ವಾತಾವರಣದ ಹಿನ್ನೆಲೆಯಲ್ಲಿ ವಿಮಾನಗಳ ಮೂಲಕ ಜನರನ್ನು ರಕ್ಷಿಸುವ ಕಾರ್ಯಾಚರಣೆ ಮಾಡಲು ಸಾಧ್ಯವಾಗದಿದ್ದರೂ, ಸಂಕಷ್ಟದಲ್ಲಿ ಸಿಲುಕಿರುವವರ ಮಾಹಿತಿಯನ್ನು ಈ ಹಾರಾಟದಿಂದ ಕಂಡು ಕೊಳ್ಳಲು ಸಾಧ್ಯವಾಗಿದೆಯೆಂದು ತಿಳಿಸಿದರು.

ಇಲ್ಲಿಯವರೆಗೆ ರಾಜ್ಯ ಸರ್ಕಾರದ ಮನವಿಯ ಮೇರೆಗೆ ಭಾರತೀಯ ಸೇನೆಯ ಎರಡು ಉಪ ತುಕಡಿಗಳನ್ನು ಮುಕ್ಕೋಡ್ಲು ಮತ್ತು ಕಾಲೂರಿನಲ್ಲಿ ನಿಯೋಜಿಸಲಾಗಿದೆ. ಒಂದು ತುಕಡಿ 2 ಹಿರಿಯ ಅಧಿಕಾರಿಗಳು, 4 ಕಿರಿಯ ಅಧಿಕಾರಿಗಳು ಹಾಗೂ 70 ಸೈನಿಕರನ್ನು ಹೊಂದಿದೆ. ರಕ್ಷಣಾ ಕಾರ್ಯ ಕೈಗೊಳ್ಳಲು ತಾಂತ್ರಿಕ ಪರಿಣತಿ ಹೊಂದಿರುವ ಒಂದು ತಂಡವನ್ನು ಕಾರ್ಯಾಚರಣೆಗೆ ನಿಯೋಜಿಸಿದ್ದು, ತಂಡದಲ್ಲಿ ಒಬ್ಬ ಹಿರಿಯ ಅಧಿಕಾರಿ, 4 ಕಿರಿಯ ಅಧಿಕಾರಿಗಳು, 34 ಇತರೆ ಅಧಿಕಾರಿಗಳು ಹಾಗೂ 4 ದೋಣಿ ರಕ್ಷಣಾ ತಂಡ ಹಾಗೂ 4 ಮೋಟಾರ್ ಬೋಟ್‍ನೊಂದಿಗೆ ಇತರೆ ರಕ್ಷಣಾ ಸಾಮಗ್ರಿಗಳನ್ನು ರಕ್ಷಣಾ ಕಾರ್ಯಕ್ಕೆ ಬಳಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್,  ಸಂಸದ ಪ್ರತಾಪ ಸಿಂಹ, ಎಂಎಲ್‍ಸಿ ಸುನಿಲ್ ಸುಬ್ರಮಣಿ, ಜಿಪಂ ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಶ್ರೀವಿದ್ಯಾ, ಎಸ್‍ಪಿ ಡಾ. ಸುಮನ್ ಪನ್ನೇಕರ್ ಮೊದಲಾದವರು ಉಪಸ್ಥಿತರಿದ್ದರು.

ಸಂತ್ರಸ್ತರಿಗೆ ಸಾಂತ್ವನ
ರಾಷ್ಟ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರನ್ನು ಮಾದಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದರು. ಮಡಿಕೇರಿಯ ಶ್ರೀಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿ ಸೇವಾಭಾರತಿಯ ಪುನರ್ವಸತಿ ಕೇಂದ್ರ್ರ ಹಾಗೂ ಮೈತ್ರಿ ಪೊಲೀಸ್ ಸಭಾಂಗಣಕ್ಕೆ ಆಗಮಿಸಿ, ಸಂತ್ರಸ್ತರಿಗೆ ಅಭಯ ನೀಡಿದರು, ಮಕ್ಕಳೊಂದಿಗೆ ಯೋಗಕ್ಷೇಮ ವಿಚಾರಿಸಿದರು.

ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪದಿಂದ ನಲುಗಿರುವ ಕೊಡಗಿನ ಸಂತ್ರಸ್ತರ ಬದುಕನ್ನು ಹಸನು ಗೊಳಿಸುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸ್ಪಂದಿಸಲಿದ್ದಾರೆ ಎಂದರು.

ಧಾರಾಕಾರ ಮಳೆಯಿಂದ ಸಂಭವಿಸಿರುವ ಗುಡ್ಡ ಕುಸಿತ, ಪ್ರವಾಹಗಳಿಂದ ಸಹಸ್ರಾರು ಮಂದಿ ಸಂತ್ರಸ್ತರಾಗಿದ್ದಾರೆ. ಅತಿವೃಷ್ಟಿ ಪೀಡಿತ ಪ್ರದೇಶಗಳ ಸಾಕಷ್ಟು ಶಾಲಾ, ಕಾಲೇಜು ಮಕ್ಕಳು ತಮ್ಮೆಲ್ಲ ಪುಸ್ತಕಗಳನ್ನು ಕಳೆದುಕೊಂಡು ಇದೀಗ ಏನೂ ಇಲ್ಲದೆ ಶಾಲೆಗೆ ತೆರಳುವ ಪರಿಸ್ಥಿತಿಗಳು ನಿರ್ಮಾಣವಾಗಿದೆ. ಕೆಲವು ಗರ್ಭಿಣಿ ಮಹಿಳೆಯರು ಪುನರ್ವಸತಿ ಕೇಂದ್ರಗಳಲ್ಲಿದ್ದು, ಇವರಿಗೆ ಇಲ್ಲಿಯೇ ಔಷಧಿ ಮತ್ತು ಅಗತ್ಯ ಚಿಕಿತ್ಸೆಗಳನ್ನು ಒದಗಿಸಲಾಗುತ್ತಿದೆ. ನೊಂದ ಮಂದಿಗೆ ಶಾಶ್ವತವಾದ ಪರಿಹಾರವನ್ನು ಕಲ್ಪಿಸಬೇಕಾಗಿದೆಯೆಂದು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು.

ಕೇಂದ್ರ್ರ ಸರ್ಕಾರ ಅತಿವೃಷ್ಟಿ ಪೀಡಿತ ಕೊಡಗಿನ ಜನತೆಯ ಸಂಕಷ್ಟಗಳಿಗೆ ರಾಜ್ಯ ಸರ್ಕಾರ, ಸ್ಥಳೀಯ ಜಿಲ್ಲಾಡಳಿತದೊಂದಿಗೆ ಸೇರಿ ಒಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಸ್ಪಂದಿಸುವ ಭರವಸೆಯನ್ನು ಸಂತ್ರಸ್ತರಿಗೆ ನೀಡಿದರು.

ಅತಿವೃಷ್ಟಿ ಪೀಡಿತ ಕೆಲ ಪ್ರದೇಶಗಳನ್ನು, ಸಂತ್ರಸ್ತರನ್ನು ತಾನು ಇದೀಗ ಭೇಟಿ ಮಾಡಿದ್ದು, ಸಾಕಷ್ಟು ಮಂದಿ ಪ್ರಾಕೃತಿಕ ವಿಕೋಪದಿಂದ ಮನೆ ಮಠಗಳೊಂದಿಗೆ ಬದುಕನ್ನೆ ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಏನು ಹೇಳಬೇಕೆಂದು ತೋರುತ್ತಿಲ್ಲವೆಂದು ಅತೀವ ದುಃಖವನ್ನು ವ್ಯಕ್ತಪಡಿಸಿ, ಸೇವಾ ಭಾರತಿ ಸಂಸ್ಥೆ ಪುನರ್ವಸತಿ ಕೇಂದ್ರದಲ್ಲಿ ಸಂತ್ರಸ್ತರ ನೆರವಿಗೆ ಶ್ರಮಿಸುತ್ತಿದೆಯಾದರೆ, ಜಿಲ್ಲಾಡಳಿತ, ಸ್ಥಳೀಯ ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರು, ರಾಜ್ಯ ಸರ್ಕಾರ ಸಂತ್ರಸ್ತರ ನೆರವಿಗೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾರತೀಯ ಸೈನ್ಯ, ವಾಯುದಳದ ತಂಡಗಳು ಅತಿವೃಷ್ಟಿಯ ಪ್ರಾಕೃತಿಕ ವಿಕೋಪದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಮುಂಬರುವ ದಿನಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಹಾಳಾದ ರಸ್ತೆ, ವಿದ್ಯುಚ್ಛಕ್ತಿ ಮೊದಲಾದ ಮೂಲಭೂತ ಸೌಲಭ್ಯಗಳನ್ನು ಮರುಸ್ಥಾಪಿಸುವ ಮೂಲಕ ಸಂತ್ರಸ್ತರ ಬದುಕನ್ನು ಉತ್ತಮ ಪಡಿಸುವ ಕಾರ್ಯವಾಗಬೇಕಾಗಿದೆ ಎಂದರು.

ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಶಾಸಕರಗಳಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಸಂಸದ ಪ್ರತಾಪ ಸಿಂಹ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ರೀನಾ ಪ್ರಕಾಶ್, ಡಿಸಿ ಶ್ರೀವಿದ್ಯಾ, ಎಸ್‍ಪಿ ಡಾ. ಸುಮನ್ ಪನ್ನೇಕರ್ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News