ಮಹಾರಾಷ್ಟ್ರದಲ್ಲಿ ಸ್ಫೋಟಕ ಪತ್ತೆ ಪ್ರಕರಣ : ಬೆಳಗಾವಿಯಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದ ಆರೋಪಿ

Update: 2018-08-25 09:59 GMT

ಮುಂಬೈ, ಆ.25: ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಎಂ.ಎಂ. ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಎಟಿಎಸ್ ನಿಂದ ಬಂಧಿತನಾಗಿರುವ ಶರದ್ ಕಲಸ್ಕರ್ ಕರ್ನಾಟಕದ ಚಿಕ್ಕಾಳೆ ಗ್ರಾಮದ ಸಮೀಪದ  ರೆಸಾರ್ಟ್ ಒಂದರಲ್ಲಿ  ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದ ಎಂದು ವಿಚಾರಣೆಯ ವೇಳೆ ತಿಳಿದು ಬಂದಿದೆ ಎನ್ನಲಾಗಿದೆ.

ನಲಸೋಪಾರದಲ್ಲಿ ವಶಪಡಿಸಿಕೊಳ್ಳಲಾದ ಸ್ಫೋಟಕಗಳಿಗೆ ಸಂಬಂಧಿಸಿದಂತೆ ವಿಚಾರಣೆ ತೀವ್ರಗೊಳಿಸಿರುವ ಎಟಿಎಸ್ ಈಗಾಗಲೇ ಬಂಧಿತರಾಗಿರುವ ಇನ್ನಿಬ್ಬರಾದ ವೈಭವ್ ರಾವತ್ ಹಾಗೂ ಸುಧನ್ವ ಗೊಂಢಲೇಕರ್ ಕೂಡ ಅಲ್ಲಿಯೇ ತರಬೇತಿ ಪಡೆದಿದ್ದರೇ ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದೆ.

ದಾಭೋಲ್ಕರ್ ಅವರನ್ನು ಆಗಸ್ಟ್ 20, 2013ರಂದು ಗುಂಡಿಕ್ಕಿ ಕೊಂದವರಲ್ಲಿ ತಾನೂ ಒಬ್ಬನಾಗಿದ್ದೆ ಎಂದು ವಿಚಾರಣೆ ವೇಳೆ ಕಲಸ್ಕರ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಅತ್ತ ಕರ್ನಾಟಕ ವಿಶೇಷ ತನಿಖಾ ತಂಡ ನಡೆಸಿದ ತನಿಖೆಯಲ್ಲಿ  ಗೌರಿ ಲಂಕೇಶ್ ಪ್ರಕರಣದಲ್ಲಿ ಪ್ರಮುಖ ಶಂಕಿತನಾಗಿರುವ ಭರತ್ ಕುರ್ನೆ ಎಂಬಾತನ ಒಡೆತನದಲ್ಲಿದ್ದ ಫಾರ್ಮ್ ಹೌಸ್ ನಲ್ಲಿ ಆರೋಪಿಗಳು ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದರೆಂದು ತಿಳಿದು ಬಂದಿತ್ತು.

 ಈ ಫಾರ್ಮ್ ಹೌಸ್ ಬೆಳಗಾವಿಯ ಚಿಕ್ಕಾಳೆ ಗ್ರಾಮದಲ್ಲಿದೆ. ಆರೋಪಿಗಳಿಗೆ 7.65 ಎಂಎಂ ಪಿಸ್ತೂಲುಗಳನ್ನು ಹಾಗೂ ಇತರ ದೇಶೀಯ ನಿರ್ಮಿತ ರಿವಾಲ್ವರುಗಳ ಬಳಕೆಯಲ್ಲಿ ತರಬೇತು ನೀಡಲಾಗಿದೆ ಎಂಬ ಮಾಹಿತಿಯೂ ದೊರಕಿದೆ.

ಬಂಧಿತ ಮೂವರನ್ನೂ ಎಟಿಎಸ್ ಸತತ ವಿಚಾರಣೆ ನಡೆಸಿದರೂ ಅವರು ತಾವು ಶಸ್ತ್ರಾಸ್ತ್ರ ತರಬೇತಿ ಪಡೆದ ಜಾಗದ ಬಗ್ಗೆ ಮಾಹಿತಿ ನೀಡಿಲ್ಲದೇ ಇದ್ದರೂ ದಾಭೋಲ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಸ್ಕರ್ ನನ್ನು  ಮತ್ತೆ ಮತ್ತೆ ಪ್ರಶ್ನಿಸಿದಾಗ ತಾನು ಕುರ್ನೆ ಒಡೆತನದ ಫಾರ್ಮ್ ಹೌಸ್ ನಲ್ಲಿ ತರಬೇತಿ ಪಡೆದಿದ್ದ ಬಗ್ಗೆ ಒಪ್ಪಿಕೊಂಡಿದ್ದಾನೆನ್ನಲಾಗಿದೆ.

ಈ ಮೂರು ಮಂದಿಯೂ ದೇಶದ ವಿವಿಧೆಡೆ ಸಂಚರಿಸಿದ್ದರಲ್ಲದೆ ಗೋವಾಕ್ಕೂ ಭೇಟಿ ನೀಡಿದ್ದರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News