ಸಾ.ರಾ.ಮಹೇಶ್‌ಗೆ ರಾಜಕೀಯ ತಿಳುವಳಿಕೆ ಇಲ್ಲ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

Update: 2018-08-25 13:50 GMT

ಬೆಂಗಳೂರು, ಆ. 25: ‘ಸಚಿವ ಸಾ.ರಾ.ಮಹೇಶ್ ಅವರು ರಾಜ್ಯಸಭಾ ಘನತೆಗೆ ಚ್ಯುತಿಯುಂಟು ಮಾಡಿದ್ದು, ಅವರಿಗೆ ರಾಜಕೀಯ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ಮತ್ತು ಗೌರವ ಇಲ್ಲ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ಕೊಡಗು ಅತಿವೃಷ್ಟಿ ಪರಿಶೀಲನೆ ವೇಳೆ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹಾಗೂ ಅವರ ಮಧ್ಯೆ ನಡೆದಿದ್ದ ಜಟಾಪಟಿಯ ಬಗ್ಗೆ ಸ್ಪಷ್ಟಣೆ ನೀಡಿದ್ದು, ತನ್ನ ಕೊಡಗು ಪ್ರವಾಸ ವೇಳಾಪಟ್ಟಿಯನ್ನು ಎರಡು ದಿನಗಳ ಹಿಂದೆ ತಯಾರಿ ಮಾಡಲಾಗಿತ್ತು ಮತ್ತು ಸಂಬಂಧಿಸಿದ ಎಲ್ಲ ಇಲಾಖೆಗಳಿಗೂ ಮಾಹಿತಿ ನೀಡಲಾಗಿತ್ತು. ಆದರೆ, ಪ್ರವಾಸದ ವೇಳೆ ಏಕಾಏಕಿ ಜಿಲ್ಲಾ ಸಚಿವರು ಕಾರ್ಯಕ್ರಮಗಳನ್ನು ಬದಲು ಮಾಡಿದರು. ಶಿಷ್ಟಾಚಾರದ ಪ್ರಕಾರ ಮೊದಲು ಮಾಜಿ ಸೇನಾಧಿಕಾರಿಗಳ ಜತೆ ಸಭೆ ನಡೆಯಬೇಕಿತ್ತು. ಬಳಿಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಭೆ ನಡೆಸಬೇಕಿತ್ತು. ಆದರೆ ಸಚಿವ ಸಾ.ರಾ.ಮಹೇಶ್ ಅವರು ಮೊದಲು ಅಧಿಕಾರಿಗಳ ಸಭೆ ನಡೆಸಲು ಒತ್ತಡ ಹಾಕಿದರು.

ಜಿಲ್ಲಾಡಳಿತದೊಂದಿಗೆ ನಡೆದ ಸಭೆಯಲ್ಲಿ ಮಾಧ್ಯಮಗಳಿಗೂ ಅವಕಾಶ ನೀಡಿ ಶಿಷ್ಟಾಚಾರ ಉಲ್ಲಂಘಿಸಲಾಗಿತ್ತು. ಮೊದಲು ಅಧಿಕಾರಿಗಳ ಸಭೆ ನಡೆಸುವಂತೆ ಸಚಿವ ಮಹೇಶ್ ಒತ್ತಾಯಿಸಿದರು. ಮತ್ತಷ್ಟು ಗೊಂದಲ ತಪ್ಪಿಸಲು ಅಧಿಕಾರಿಗಳ ಸಭೆಗೆ ತಾನು ತೆರಳಿದೆ. ಆದರೆ, ಈ ವೇಳೆಗಾಗಲೇ ಸುದ್ದಿಗೋಷ್ಠಿ ಕರೆಯಲಾಗಿತ್ತು. ಮಾಧ್ಯಮದವರ ಎದುರೇ ಅಧಿಕಾರಿಗಳ ಸಭೆಯನ್ನು ತರಾತುರಿಯಲ್ಲಿ ನಡೆಸಬೇಕಾಯಿತು. ಜಿಲ್ಲಾಡಳಿತದ ಕಾರ್ಯಕ್ರಮದ ಪ್ರಕಾರವೆ ನಡೆದುಕೊಂಡರೂ ಸಚಿವ ಸಾ.ರಾ. ಮಹೇಶ್ ಅವರ ಪ್ರತಿಕ್ರಿಯೆ ಮತ್ತು ಟೀಕೆ ದುರದೃಷ್ಟಕರ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

‘ರಕ್ಷಣಾ ಸಚಿವೆಯಾಗಿ ತನ್ನ ‘ಪರಿವಾರ’ ಪದ ಬಳಕೆ ಬಗ್ಗೆ ತಪ್ಪು ವ್ಯಾಖ್ಯಾನ ಮಾಡಲಾಗುತ್ತಿದೆ. ರಕ್ಷಣಾ ಇಲಾಖೆಯ ಪರಿವಾರದಲ್ಲಿ ನಿವೃತ್ತ ಸೈನಿಕರು ಸೇರಿರುತ್ತಾರೆ ಎಂಬರ್ಥದಲ್ಲಿ ‘ಪರಿವಾರ’ ಪದ ಬಳಸಲಾಗಿದೆ’

-ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News