'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ ವೀಕ್ಷಿಸಿದ ಸಿದ್ದರಾಮಯ್ಯ
ಮೈಸೂರು,ಆ.25: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದ ಡಿ.ಆರ್.ಸಿ ಚಿತ್ರಮಂದಿರದಲ್ಲಿ 'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಲನಚಿತ್ರ ವೀಕ್ಷಿಸಿದರು.
ತಮ್ಮ ಎಡೆಬಿಡದ ಕಾರ್ಯಕ್ರಮಗಳ ಮಧ್ಯೆ ಶನಿವಾರ ಫುಲ್ ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ಸಿದ್ದರಾಮಯ್ಯ ಬೆಳಿಗ್ಗೆ ಅವರ ನೆಚ್ಚಿನ ರಮ್ಯಾ ಹೋಟೆಲ್‍ನಲ್ಲಿ ಸ್ನೇಹಿತರೊಂದಿಗೆ ಉಪಹಾರ ಸೇವಿಸಿ ನಂತರ ತಮ್ಮ ಟಿ.ಕೆ.ಲೇಔಟ್ ಮನೆಯಲ್ಲಿ ಸ್ಥಳೀಯ ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಸಂಬಂಧ ಚರ್ಚೆ ನಡೆಸಿದರು. ನಂತರ ಸಂಜೆ 7 ಗಂಟೆಗೆ ಹಣಸೂರು ರಸ್ತೆಯಲ್ಲಿರುವ ಡಿಆರ್‍ಸಿ ಚಿತ್ರಮಂದಿರಕ್ಕೆ ತೆರಳಿ 'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಲನಚಿತ್ರ ವೀಕ್ಷಿಸಿದರು. ರಿಷಬ್ ಶೆಟ್ಟಿ ನಿರ್ದೇಶನದ 'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರವು ನಿನ್ನೆಯಷ್ಟೇ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಅನಂತ್ ನಾಗ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಸೆಲ್ಫಿಗೆ ಮುಗಿಬಿದ್ದ ಸಾರ್ವಜನಿಕರು: ಚಲನಚಿತ್ರ ವೀಕ್ಷಿಸಿ ಸಿದ್ದರಾಮಯ್ಯ ಹೊರಬರುತ್ತಿದ್ದಂತೆ ಅಲ್ಲಿದ್ದ ಸಾರ್ವಜನಿಕರು ಸಿದ್ದರಾಮಯ್ಯ ಅವರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು. ಈ ವೇಳೆ ಸಿದ್ದರಾಮಯ್ಯ ಸಾವಚಿತ್ತದಿಂದ ಎಲ್ಲರೊಂದಿಗೂ ಸೆಲ್ಫಿ ತೆಗೆಸಿಕೊಂಡು ನಗುಮುಖದೊಂದಿಗೆ ಎಲ್ಲರತ್ತ ಕೈಬೀಸಿ ನಡೆದರು.