×
Ad

'ನಾನು ಮತ್ತೆ ಸಿಎಂ ಆಗುತ್ತೇನೆ' ಎಂಬ ಹೇಳಿಕೆ: ಕೊನೆಗೂ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ

Update: 2018-08-25 20:53 IST

ಮೈಸೂರು,ಆ.25: ರಾಜ್ಯದಲ್ಲಿ ಸಮ್ಮಿಶ್ರ ಸರಕಾರವಿರುವುದರಿಂದ ಕೇಂದ್ರ ಸರ್ಕಾರ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರು ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತ ಮೈಸೂರಿಗೆ ಶನಿವಾರ ಆಗಮಿಸಿರುವ ಅವರು ರಮ್ಯಾ ಹೋಟೆಲ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕೇಂದ್ರ ಸಚಿವರು ಕೊಡಗಿಗೆ ಬರುವ ಮೊದಲೇ ಪ್ರಧಾನಿಯವರ ಜೊತೆ ಮಾತನಾಡಿಕೊಂಡು ಬರಬೇಕಿತ್ತು. ಆದರೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡಲಿಲ್ಲ. ಕೊಡಗಿನಲ್ಲಿ ಸಾಕಷ್ಟು ಅನಾಹುತ ಸಂಭವಿಸಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಪರಿಹಾರ ವಿತರಣೆಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕೇರಳಕ್ಕೂ ಕೊಟ್ಟಿರುವ ಹಣ ಸಾಲುವುದಿಲ್ಲ, ಕೇಂದ್ರ ಸರಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಕೂಡಲೇ ಕೊಡಗಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಕೊಡಗಿನಲ್ಲಿ ದೊಡ್ಡ ಅನಾಹುತವಾಗಿದೆ. ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅನಾಹುತವಾಗಿದೆ. ಅಲ್ಲಿನ ಜನರು ಸಾಕಷ್ಟು ಕಷ್ಟಗಳನ್ನ ಅನುಭವಿಸುತ್ತಿದ್ದಾರೆ. ನಾನು ಸಹ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ ಎಂದ ಅವರು, ಕೇಂದ್ರ ಸಚಿವರು ಕೊಡಗಿಗೆ ಭೇಟಿ ನೀಡಿದ್ದರೂ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಸ್ಥಳೀಯ ಸಂಸದರು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಅದನ್ನು ಬಿಟ್ಟು ಬರೀ ಭಾಷಣ ಹೊಡಿತಾರೆ. ಕೇವಲ ಭಾಷಣ ಮಾಡುವುದಕ್ಕಾ ಸಂಸದರರಿವುದು ಎಂದು ಪ್ರಶ್ನಿಸಿದರು. 

ಮುಂದಿನ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ: ಮುಂದಿನ ಬಾರಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ನಾನು ಮತ್ತೆ ಸಿಎಂ ಆಗುತ್ತೇನೆ ಎಂಬ ಹೇಳಿಕೆಯ ಅರ್ಥವನ್ನ ನೀವು ಹೇಗೆ ಬೇಕಾದರೂ ಕಲ್ಪಿಸಿಕೊಳ್ಳಿ. ನಿನ್ನೆ ಹಾಸನದ ಹೊಳೆ ನರಸೀಪುರದಲ್ಲಿ ದೇವಸ್ಥಾನದ ಕಾರ್ಯಕ್ರಮದಲ್ಲಿ ಜನರು ಕೆಲವೊಂದು ಬೇಡಿಕೆಗಳನ್ನು ಇಟ್ಟರು. ಜನರ ಬೇಡಿಕೆಗಳನ್ನ ಈಡೇರಿಸುವುದಕ್ಕೆ ಮತ್ತೆ ನಾವೇ ಅಧಿಕಾರಕ್ಕೆ ಬರಬೇಕು ಎಂದು ಹೇಳಿದ್ದೇನೆ. ಮುಂದಿನ ಚುನಾವಣೆಯಲ್ಲಿ ಮತ್ತೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ನೀವು ಹೇಳಿದ ಕೆಲಸವನ್ನು ಮಾಡೋಣ ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನು ? ಎಂದು ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡರು. 

ಸೆ.3ಕ್ಕೆ ಲಂಡನ್ ಪ್ರವಾಸ: ಲಂಡನ್‍ನಲ್ಲಿ ನನ್ನ ಸ್ನೇಹಿತನಿದ್ದಾನೆ. ನಾನು ಮುಖ್ಯಮಂತ್ರಿಯಾದಾಗಿನಿಂದಲೂ ಲಂಡನ್‍ಗೆ ಬರುವಂತೆ ಒತ್ತಡ ಹಾಕುತ್ತಿದ್ದ. ಹೀಗಾಗಿ ಸೆಪ್ಟಂಬರ್ 3 ರಂದು ನನ್ನ ಮಗ ಡಾ.ಯತೀಂದ್ರ, ಸಚಿವರಾದ ಕೆ.ಜೆ ಜಾರ್ಜ್, ಆರ್.ವಿ.ದೇಶಪಾಂಡೆ ಮತ್ತು ವಿಧಾನಪರಿಷತ್ ಸದಸ್ಯ ಗೋವಿಂದ್ ರಾಜು ಅವರೊಂದಿಗೆ ಲಂಡನ್‍ಗೆ ತೆರಳುತ್ತಿದ್ದೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News