ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸನ್ನದ್ಧ: ಬಿ.ಕೆ.ಹರಿಪ್ರಸಾದ್
ಹುಬ್ಬಳ್ಳಿ, ಆ.25: ಲೋಕಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್ ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ. ಈ ಸಂಬಂಧ ತಳಮಟ್ಟದಲ್ಲಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೆ ಚುನಾವಣೆಯ ಗೆಲುವಿಗೆ ತಳಮಟ್ಟದ ಕಾರ್ಯಕರ್ತರು ಮುಖ್ಯಪಾತ್ರ ವಹಿಸಲಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಳಮಟ್ಟದ ಕಾಂಗ್ರೆಸ್ ಕಾರ್ಯಕರ್ತರನ್ನು ಗುರುತಿಸುವಂತಹ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಪಕ್ಷದ ನಿರ್ಧಾರವಾಗಿದ್ದು, ಆ ಪ್ರಕಾರವಾಗಿ ಮೈತ್ರಿ ಮುಂದುವರೆಯಲಿದೆ. ಈ ಬಗ್ಗೆ ಅನಗತ್ಯವಾದ ಗೊಂದಲ ಬೇಡ. ಕಾಂಗ್ರೆಸ್-ಜೆಡಿಎಸ್ ನಡುವೆ ಯಾವುದೆ ಭಿನ್ನಾಭಿಪ್ರಾಯವಿಲ್ಲವೆಂದು ಅವರು ಸಮರ್ಥನೆ ನೀಡಿದರು.
ಮಾಜಿ ಪ್ರಧಾನಿ ವಾಜಪೇಯಿ ಸಾವಿನ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂಬ ಸಂಸದ ಪ್ರಹ್ಲಾದ್ ಜೋಶಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಸ್ವತಃ ವಾಜಪೇಯಿ ಅವರ ಸಹೋದರಿ, ಮಗಳು ಶುಕ್ಲಾ ನೀಡಿದ ಹೇಳಿಕೆಯನ್ನು ಸಂಸದ ಪ್ರಹ್ಲಾದ್ ಜೋಶಿ ಗಮನಿಸಿ, ಕಾಂಗ್ರೆಸ್‌ನತ್ತ ಬೊಟ್ಟು ಮಾಡಲಿ ಎಂದು ಅವರು ಹೇಳಿದರು.